ಕೋಲ್ಕತ್ತ, ಸೆ 30 (DaijiworldNews/DB): ಮಮತಾ ಬ್ಯಾನರ್ಜಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರದ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಸುವೇಂದು ಅಧಿಕಾರಿ, ಸಾರ್ವಜನಿಕ ಹಣಕಾಸು ನಿರ್ವಹಣಾ ಇಲಾಖೆಗೆ ಅನುದಾನ ವಿವರವನ್ನು ನೀಡುವುದಕ್ಕೂ ಮುನ್ನ ಕೇಂದ್ರದಿಂದ ನೀಡಲಾದ ಹಣವನ್ನು ವೇತನ ಮತ್ತು ಸಂಚಿತ ನಿಧಿಗೆ ರಾಜ್ಯ ಸರ್ಕಾರ ರವಾನೆ ಮಾಡಿದೆ. ಆ ಮೂಲಕ ಬೇರೆ ಯೋಜನೆಗಳಿಗಾಗಿ ಈ ಸರ್ಕಾರ ಕೇಂದ್ರದ ಹಣವನ್ನು ಬಳಕೆ ಮಾಡುತ್ತಿರುವುದು ಸ್ಪಷ್ಟ ಎಂದಿದ್ದಾರೆ.
ವಹಿವಾಟಿನ ಬಗ್ಗೆ ತನಿಖೆಯಾಗಬೇಕು. ಅಲ್ಲದೆ ಅಧಿಕಾರಿಗಳ ಪ್ರಭಾವಕ್ಕೊಳಗಾದವರ ವಿಚಾರಣೆ ತೀರಾ ಅಗತ್ಯವಾಗಿದೆ. ರಾಜ್ಯ ಹಣಕಾಸು ಕಾರ್ಯದರ್ಶಿ ಮನೋಜ್ ಪಂತ್ ಅವರ ಆದ್ಯತೆಯಾದ ಸಾರ್ವಜನಿಕ ವಲಯದ ಬ್ಯಾಂಕ್ನಲ್ಲಿ ಖಾತೆ ತೆರೆಯಬೇಕೆಂಬ ಮನವಿಯನ್ನು ರಾಜ್ಯ ಸರ್ಕಾರ ಅವಗಣನೆ ಮಾಡಿದೆ ಎಂದೂ ಪತ್ರದಲ್ಲಿ ಆಪಾದನೆ ಮಾಡಿದ್ದಾರೆ.