ಗುಂಡ್ಲುಪೇಟೆ, ಸೆ.30 (DaijiworldNews/HR): ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3570 ಕಿ.ಮೀ. ದೂರ ಹೆಜ್ಜೆ ಹಾಕುತ್ತಿದ್ದು, ಈ ಹೆಜ್ಜೆ ರಾಷ್ಟ್ರಕ್ಕೆ ಕೊಡುಗೆ. ಅವರ ಹೆಜ್ಜೆಯೊಂದಿಗೆ ಒಂದು ಇತಿಹಾಸ ನಿರ್ಮಾಣವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವುದು, ಯುವಕರ ನಿರುದ್ಯೋಗ ಸಮಸ್ಯೆ ಪರಿಹಾರ, ರೈತರಿಗೆ ಗೌರವಯುತ ಆದಾಯ ಸಿಗುವಂತೆ ಮಾಡುವುದು, ರಾಜ್ಯದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ, ಜನ ಸಾಮಾನ್ಯರ ಬದುಕು ನರಕ ಮಾಡಿರುವ ಬೆಲೆ ಏರಿಕೆ ಜತೆಗೆ ಜನರ ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಆಕಾಶಕ್ಕೆ ಹೋಗುತ್ತಿರುವುದನ್ನು ತಡೆಯುವುದೇ ಈ ಯಾತ್ರೆಯ ಉದ್ದೇಶವಾಗಿದೆ ಎಂದರು.
ಇನ್ನು ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಯಾವತ್ತೂ ಅಧಿಕಾರದ ಬಗ್ಗೆ ಯೋಚಿಸುವುದಿಲ್ಲ, ಜನಸಾಮಾನ್ಯರ ಬದುಕಿನ ಬಗ್ಗೆ ಯೋಚಿಸುತ್ತದೆ ಎಂದಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತೀಯರ ಮನದಲ್ಲಿ ಅಸೂಯೆ, ದ್ವೇಷ ಹೆಚ್ಚಿಸಿದ್ದು, ಇದನ್ನು ತೊಡೆದು ಹಾಕಬೇಕು, ಎಲ್ಲರನ್ನು ಒಗ್ಗೂಡಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.