ಬೆಂಗಳೂರು, ಸೆ 30 (DaijiworldNews/DB): ಭೂತಾನ್ನಿಂದ ಅಡಕೆ ಆಮದಿಗೆ ಅವಕಾಶ ನೀಡಿರುವ ಕೇಂದ್ರದ ನಿರ್ಧಾರದಿಂದ ದೇಶೀಯ ಅಡಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುವುದಿಲ್ಲ. ಕೃಷಿಕರು ಈ ವಿಚಾರದಲ್ಲಿ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ಕೇಂದ್ರ ಅವಕಾಶ ಕಲ್ಪಿಸಿದೆ. ಆದರೆ ಇದು ಕೇವಲ ಹಸಿ ಅಡಕೆಗೆ ನೀಡಿರುವ ಅನುಮತಿ. ಅಲ್ಲದೆ ಆ ದೇಶಕ್ಕೆ ನಮ್ಮ ದೇಶದಿಂದ ಸಂಸ್ಕರಿತ ಅಡಕೆ ಉತ್ಪನ್ನಗಳು ಹೆಚ್ಚು ರಫ್ತು ಆಗುತ್ತಿದ್ದು, ಇದಕ್ಕೆ ಹೋಲಿಸಿದರೆ ಆಮದು ಪ್ರಮಾಣ ತೀರಾ ಕಡಿಮೆಯಿದೆ. ಕೃಷಿಕರು ಇದರಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಭಾರತ ಮತ್ತು ಭೂತಾನ್ ಮಿತ್ರ ರಾಷ್ಟ್ರಗಳಾಗಿದ್ದು, ವಾಹಿಜ್ಯ ವಹಿವಾಟು ಕೂಡಾ ಎರಡೂ ದೇಶಗಳ ನಡುವೆ ಉತ್ತಮವಾಗಿದೆ. ಅಡಕೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರದೊಂದಿಗೆ ಸದಾ ಸಂಪರ್ಕದಲ್ಲಿದ್ದೇವೆ. ಶೀಘ್ರ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗ ಕೊಂಡೊಯ್ದು ಸ್ಥಳೀಯ ಅಡಕೆ ಬೆಳೆಗಾರರ ಆತಂಕದ ಕುರಿತು ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದವರು ತಿಳಿಸಿದರು.