ಬೆಂಗಳೂರು,ಫೆ 12 (MSP): ಫೇಸ್ಬುಕ್ ಮೂಲಕ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ದಂಪತಿ, ಈಗ ವಾಟ್ಸ್ಆ್ಯಪ್ ಚಾಟ್ ನಿಂದಾಗಿ ದೂರವಾಗಿದ್ದಾರೆ. ಇದು ವಿಚಿತ್ರವಾದರೂ ಸತ್ಯ. ಈ ಘಟನೆ ನಡೆದಿರುವುದು ರಾಜಧಾನಿ ಬೆಂಗಳೂರಿನಲ್ಲಿ.
ಛತ್ತೀಸ್ಗಢದ ರಾಯಪುರ ಮೂಲದ ಯುವತಿ ಹಾಗೂ ಬೆಂಗಳೂರು ಮೂಲದ ಯುವಕ ಇವರಿಬ್ಬರಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿತ್ತು. ಇದೇ ಪರಿಚಯ ಕೊನೆಗೆ ಪ್ರೀತಿಗೆ ತಿರುಗಿತ್ತು. ಮನೆಯಲ್ಲಿ ವಿರೋಧವಿದ್ದರೂ ಮನೆಯವರ ವಿರೋಧದ ನಡುವೆ ಪುಣೆಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರು ದಾಂಪತ್ಯ ಜೀವನ ಪ್ರವೇಶಿಸಿದ್ದರು. ಬಳಿಕ ಯುವಕ ಯುವತಿಯನ್ನು ರಾಯ್ಪುರದಲ್ಲೇ ಬಿಟ್ಟು, ತನ್ನ ಮನೆಯವರನ್ನು ಒಪ್ಪಿಸಿ ಕರೆಸಿಕೊಳ್ಳುತ್ತೇನೆ ಎಂದು ಬೆಂಗಳೂರಿಗೆ ಬಂದಿದ್ದ. ಈ ನಡುವೆ ಸುಮಾರು ಒಂದೂವರೆ ವರ್ಷ ರಾಯಪುರದ ಪತ್ನಿ ಮನೆಗೆ ಹೋಗಿ ಬಂದು ಆಗ್ಗಾಗ್ಗೆ ಆಕೆಯನ್ನು ನೋಡಿಕೊಂಡು ಹೋಗುತ್ತಿದ್ದ.
ಇತ್ತೀಚೆಗೆ ೩ ತಿಂಗಳ ಹಿಂದೆ ಬೆಂಗಳೂರಿನ ನಾರಾಯಣಪುರದಲ್ಲಿ ಮನೆ ಮಾಡಿ ಪತ್ನಿಯನ್ನು ಕರೆಸಿಕೊಂಡು ಜತೆಯಲ್ಲೇ ವಾಸಿಸತೊಡಗಿದ್ದ. ಈ ನಡುವೆ ಯುವತಿಯ ಕಡೆಯವರು ಆಕೆಯ ಯೋಗಕ್ಷೇಮ ವಿಚಾರಿಸಿಕೊಳ್ಳಲು ಆಕೆಯ ಮೊಬೈಲ್ಗೆ ವಾಟ್ಸಾಪ್ ಮೆಸೇಜ್ ಮಾಡಿದ್ದರು. ಗಂಡ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೇಯೇ ಎಂದು ಕೇಳಿದ್ದರು. ಇದರಿಂದ ಅಸಮಧಾನಗೊಂಡ ಗಂಡ ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಲ್ಲದೆ ಆಕೆಯ ಶೀಲ ಶಂಕಿಸಿ ವಿಚ್ಛೇದನ ಕೊಡು ಎಂದು ಪೀಡಿಸುತ್ತಿದ್ದಾನೆ. ಕೊನೆಗೆ ಗಂಡನ ಹಿಂಸೆ ತಾಳಲಾರದೆ ಬೇಸತ್ತು ಯುವತಿ ತನ್ನೂರಿಗೆ ತೆರಳಿದ್ದಾಳೆ. ಅಷ್ಟೇ ಅಲ್ಲದೆ ರಾಯಪುರ ಮಹಿಳಾ ಠಾಣೆಯಲ್ಲಿ ಗಂಡನ ವಿರುದ್ದ ದೂರು ದಾಖಲಿಸಿದ್ದಾಳೆ.