ಜೈಪುರ, ಸೆ 30 (DaijiworldNews/DB): ಇದು ಇಂಟರ್ನೆಟ್ ಯುಗ. ಇಲ್ಲಿ ಏನೇ ನಡೆದರೂ, ಯಾವುದೇ ಸುಪ್ತ ಪ್ರತಿಭೆಗಳಿದ್ದರೂ ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತದೆ. ರಾಜಸ್ತಾನ ಮೂಲದ ವೃದ್ದೆಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜಸ್ಥಾನದ ಈ ಅಜ್ಜಿಯ ಇಂಗ್ಲಿಷ್ಗೆ ನೆಟ್ಟಿಗರು ಬೆರಗಾಗಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಹತ್ತದಿದ್ದರೂ, ವಿದ್ಯಾವಂತರನ್ನೇ ನಾಚಿಸುವಂತೆ ಸ್ಪಷ್ಟ ಮತ್ತು ಸುಲಲಿತವಾಗಿ ಇಂಗ್ಲಿಷ್ನಲ್ಲಿ ಅಜ್ಜಿ ಮಾತನಾಡಿದ್ದಾಳೆ. ವೀಡಿಯೋದಲ್ಲಿ ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯನ್ನು ಹೇಳಿರುವ ಅಜ್ಜಿ, ಒಂದು ವರ್ಷ ಕಾಲ ನಿರಂತರವಾಗಿ ಗಾಧೀಜಿ ಕುರಿತ ಇಂಗ್ಲಿಷ್ ಪ್ರಬಂಧಗಳನ್ನು ಓದಿದ್ದರಂತೆ. ಪ್ರಬಂಧ ಓದುತ್ತಾ ಗಾಂಧೀಜಿ ಗುಣಗಳನ್ನು ಮೆಚ್ಚಿ ಅದನ್ನು ಹೇಳಲು ಪ್ರಾರಂಭಿಸಿದರಂತೆ.
ಸದ್ಯ ಅಜ್ಜಿ ಇಂಗ್ಲಿಷ್ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದು, ಇಂಟರ್ನೆಟ್ ಸೆನ್ಸೇಶನ್ ಆಗಿ ಹೊರಹೊಮ್ಮಿದ್ದಾರೆ.