ಚಾಮರಾಜನಗರ, ಸೆ.30 (DaijiworldNews/HR): ದೇಶ ಎದುರಿಸುತ್ತಿರುವ ಸಮಸ್ಯೆಗಳು, ಹಿಂಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಲು ಇರುವ ಮಾರ್ಗಗಳನ್ನು ವಿರೋಧ ಪಕ್ಷದ ಪಾಲಿಗೆ ಮುಚ್ಚಲಾಗಿದ್ದು, ಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಭಾರತ್ ಜೋಡೋ ಯಾತ್ರೆ'ಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ವಿಚಾರಗಳನ್ನು ಹೇಳಲು ಅವಕಾಶವಿಲ್ಲ. ಸಂಸತ್ತಿನಲ್ಲಿ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ, ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶವಿಲ್ಲ. ಆದ್ದರಿಂದ ಪಾದಯಾತ್ರೆ ಬಿಟ್ಟು ಬೇರೆ ದಾರಿ ನಮಗಿಲ್ಲ ಎಂದರು.
ಇನ್ನು ಈ ಯಾತ್ರೆ ದೇಶದ ಧ್ವನಿ. ಇಲ್ಲಿ ನಾನೊಬ್ಬನೇ ಅಲ್ಲ. ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದ ಭಾವ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯ ಪ್ರವೇಶಿಸಿದ ಪಾದಯಾತ್ರೆಯ ಮೊದಲ ದಿನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಚ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಧ್ರುವನಾರಾಯಣ, ಬಿ ಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ, ಎಂಬಿ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.