ನವದೆಹಲಿ, ಸೆ 30 (DaijiworldNews/DB): ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ (ಸಿಡಿಎಸ್) ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅನಿಲ್ ಚೌಹಾಣ್ ಅವರು ಇಂದು (ಶುಕ್ರವಾರ) ಅಧಿಕಾರ ಸ್ವೀಕರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯುನ್ನತ ಹುದ್ದೆಯ ಜವಾಬ್ದಾರಿ ನನಗೆ ದೊರಕಿರುವುದಕ್ಕೆ ಹೆಮ್ಮೆಯಾಗುತ್ತಿದೆ. ರಕ್ಷಣಾ ಪಡೆಗಳ ನಿರೀಕ್ಷೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸವಾಲುಗಳನ್ನು ನಿಭಾಯಿಸುವ ಮೂಲಕ ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತೇನೆ ಎಂದರು.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ನೌಕಾಪಡೆಯ ಉಪ ಅಡ್ಮಿರಲ್ ಎಸ್.ಎನ್. ಘೋರ್ಮಾಡೆ, ಏರ್ ಮಾರ್ಷಲ್ ಬಿ.ಆರ್. ಕೃಷ್ಣ ಉಪಸ್ಥಿತರಿದ್ದರು.
ಅನಿಲ್ ಚೌಹಾಣ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಮುಂದಿನ ಆದೇಶದವರೆಗೆ ಕೇಂದ್ರದ ರಕ್ಷಣಾ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಒಂಬತ್ತು ತಿಂಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು. ಬಳಿಕ ತೆರವಾಗಿದ್ದ ಹುದ್ದೆಗೆ ಇದೀಗ ಅನಿಲ್ ಚೌಹಾಣ್ ನೇಮಕಗೊಂಡಿದ್ದಾರೆ.
61 ವರ್ಷದ ಚೌಹಾಣ್ ಅವರು ಅನುಭವಿ ಅಧಿಕಾರಿಯಾಗಿದ್ದು, ಮಿಲಿಟರಿ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪೂರ್ವ ಸೇನಾ ಕಮಾಂಡರ್ ಆಗಿದ್ದ ಅವರು ಕಳೆದ ವರ್ಷ ಮೇ 31ರಂದು ಸೇವಾ ನಿವೃತ್ತಿಗೊಂಡಿದ್ದರು. ನಿವೃತ್ತಿಯ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ರಾಷ್ಟ್ರೀಯ ಭದ್ರತಾ ಸಮಿತಿಯ ಮಿಲಿಟರಿ ಸಲಹೆಗಾರರಾಗಿ ಕರ್ತವ್ಯ ನಿಭಾಯಿಸಿದ್ದರು.