ಚಿತ್ರದುರ್ಗ, ಸೆ 30 (DaijiworldNews/MS): ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪದಚ್ಯುತಿಗೊಳಿಸಿ, ಹೊಸ ಪೂರ್ಣಕಾಲೀನ ಪೀಠಾಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡಬೇಕು ಎಂದು ವೀರಶೈವ ಸಮುದಾಯದ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಡಾ.ಶಿವಮೂರ್ತಿ ಶಿವಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತ ಬೆನ್ನಲ್ಲೇ, ಮಠದ ಪೀಠಾಧ್ಯಕ್ಷರ ಆಯ್ಕೆ ಕುರಿತಂತೆ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮುಖಂಡರ ಸಭೆಯನ್ನು ಚಿತ್ರದುರ್ಗದ ಎಸ್.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ನಡೆಸಲಾಗಿತ್ತು.
ಸಭೆಯಲ್ಲಿ ಒಂದು ಗುಂಪು ಈಗಿನ ಪೀಠಾದ್ಯಕ್ಷರನ್ನು ವಜಾಗೊಳಿಸಿ ಹೊಸಬರ ನೇಮಿಸಬೇಕು ಎಂಬ ಆಗ್ರಹಕ್ಕೆ ಕೇಳಿಬಂದಾಗ, ಇನ್ನೊಂದು ಗುಂಪು ಒಂದು ವೇಳೆ ಶಿವಮೂರ್ತಿ ಶರಣರು ನಿರ್ದೋಷಿಯಾಗಿ ಹೊರ ಬಂದರೆ ಏನು ಮಾಡುವಿರಿ ಎಂಬ ವಾದ ಮುಂದಿಟ್ಟಿತು.
ಸಮಾಲೋಚನಾ ಸಭೆಯಲ್ಲಿ ಶಿವಮೂರ್ತಿ ಮುರುಘಾ ಶರಣರ ಹೆಸರನ್ನು ಕೆಲವರು ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ಷೇಪ ಕೇಳಿಬಂತು. ಮುರುಘಾ ಶರಣರ ಹೆಸರು ಪ್ರಸ್ತಾಪಿಸದಂತೆ ಆಕ್ಷೇಪಿಸಿದಾಗ, ಹೆಸರು ಪ್ರಸ್ತಾಪಿಸಿದೇ ಚರ್ಚೆ ನಡೆಸುವುದು ಸಾಧ್ಯವೇ ಎಂದು ಮತ್ತೊಂದು ಗುಂಪಿನವರು ಪ್ರಶ್ನಿಸಿದರು. ಇದರಿಂದ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸಭಿಕರು ಪರಸ್ಪರ ವಾದಕ್ಕಿಳಿದರು. ಪೊಲೀಸರು ಹಾಗೂ ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಅಂತಿಮವಾಗಿ ಮುರುಘಾ ಮಠಕ್ಕೆ, ಹೊಸ ಪೀಠಾಧ್ಯಕ್ಷರ ಆಯ್ಕೆ ಮಾಡೋದಕ್ಕೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಮುರುಘಾ ಶ್ರೀಗಳನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ಕೈಬಿಟ್ಟು, ಹೊಸ ಪೀಠಾಧ್ಯಕ್ಷರ ಆಯ್ಕೆಯ ಬಗ್ಗೆ ಶೀಘ್ರವೇ ನಿರ್ಧಾರ ಹೊರ ಬೀಳಲಿದೆ ಎನ್ನಲಾಗಿದೆ.