ನವದೆಹಲಿ, ಸೆ. 29 (DaijiworldNews/SM): ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧರ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಗುರುವಾರ ಹೇಳಿದ್ದಾರೆ.
ರಾಜಸ್ಥಾನದ ಬಿಕ್ಕಟ್ಟು ಪರಿಹರಿಸುವ ಸಂಬಂಧ ನಡೆದ ಹಲವಾರು ಸಭೆಗಳ ನಂತರ ವೇಣುಗೋಪಾಲ್ ಅವರು ಸೋನಿಯಾ ಗಾಂಧಿಯವರ 10, ಜನಪಥ್ ನಿವಾಸದ ಹೊರಗೆ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ನಾಳೆ ಯಾರು ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಲಿದೆ ಎಂದು ಅವರು ತಿಳಿಸಿದರು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ರಾಜ್ಯದಲ್ಲಿನ ರಾಜಕೀಯ ಬಿಕ್ಕಟ್ಟಿನ ನೈತಿಕ ಹೊಣೆಗಾರಿಕೆ ಹೊತ್ತು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಅವರು ಸಿಎಂ ಆಗಿ ಮುಂದುವರೆಯುವ ಬಗ್ಗೆ ಪಕ್ಷದ ಮುಖ್ಯಸ್ಥರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಇಂದು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ರಾಜಸ್ಥಾನದಲ್ಲಿನ ಬಿಕ್ಕಟ್ಟು ಬಗೆಹರಿಸಲು ಬಂದಿದ್ದ ಕೇಂದ್ರದ ವೀಕ್ಷಕರನ್ನು ಧಿಕ್ಕರಿಸಿ, ಪಕ್ಷದ ಶಾಸಕರ ಸಭೆ ನಡೆಸುವ ಅವರ ಯೋಜನೆಯನ್ನು ವಿಫಲಗೊಳಿಸಲಾಯಿತು. ಭಾನುವಾರ ನಡೆದ ಈ ಬೆಳವಣಿಗೆಗಳಿಗೆ ಕ್ಷಮೆಯಾಚಿಸಿದ್ದೇನೆ ಎಂದರು.