ಮುಝಾಫರ್ನಗರ, 29 (DaijiworldNews/DB): ಬಂಧಿಸಲ್ಪಟ್ಟ ಎರಡೇ ಗಂಟೆಯಲ್ಲಿ ಬಿಜೆಪಿಯ ನಾಯಕರು, ಹಿಂದುತ್ವ ಪ್ರತಿಪಾದಕಿ ಸೇರಿದಂತೆ ಹಲವರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
2013ರ ಮುಝಾಫರ್ನಗರ ಗಲಭೆ ಪ್ರಕರಣ ಸಂಬಂಧಿಸಿ ಉತ್ತರ ಪ್ರದೇಶದ ವೃತ್ತಿಪರ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ (ಸ್ವತಂತ್ರ ಉಸ್ತುವಾರಿ) ಕಿರಿಯ ಸಚಿವ ಕಪಿಲ್ ದೇವ್ ಅಗರ್ವಾಲ್, ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ, ಹಿಂದುತ್ವ ಪ್ರತಿಪಾದಕಿ ಸಾಧ್ವಿ ಪ್ರಾಚಿ ಸೇರಿದಂತೆ ಹಲವರು ಮಂಗಳವಾರ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿದ್ದರು. ಬಳಿಕ ಮುಝಾಫರ್ನಗರದ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಎರಡು ಗಂಟೆ ಕಾಲ ಬಂಧನದಲ್ಲಿದ್ದ ಆರೋಪಿಗಳು ಬಳಿಕ ಜಾಮೀನು ಪಡೆದು ಹೊರ ಬಂದರು.
ಜಾಮೀನು ಪಡೆದು ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಪಿಲ್ ದೇವ್ ಅಗರ್ವಾಲ್, ಅಖಿಲೇಶ್ ಯಾದವ್ ನೇತೃತ್ವದ ಹಿಂದಿನ ಸರ್ಕಾರ ನಕಲಿ ಪ್ರಕರಣವನ್ನು ನಮ್ಮ ಮೇಲೆ ದಾಖಲಿಸಿದ್ದಾರೆ. ಆ ಮೂಲಕ ಅವರ ಸರ್ಕಾರದ ವೈಫಲ್ಯ ಮುಚ್ಚಿ ಹಾಕುವುದು ಅವರ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅನುಮತಿಯಿಲ್ಲದೆ 2013ರ ಆಗಸ್ಟ್ 31ರಂದು ನಾಗಲಾ ಮಂಡೌರ್ನಲ್ಲಿ ಪಂಚಾಯತಿ ನಡೆಸಿದ್ದಕ್ಕಾಗಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಆದರೆ ಬಳಿಕ ಇದು ಕೋಮು ಹಿಂಸಾಚಾರಕ್ಕೆ ಕಾರಣವಾಗಿ ಕನಿಷ್ಠ 50 ಮಂದಿ ಜೀವ ಕಳೆದುಕೊಂಡಿದ್ದರು. ಅಲ್ಲದೆ ಸುಮಾರು 50 ಸಾವಿರ ಮಂದಿಯನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿತ್ತು. ಪ್ರಕರಣ ಸಂಬಂಧಿಸಿ ಆರೋಪಿಗಳ ವಿರುದ್ದ ನ್ಯಾಯಾಲಯವು ಸಮನ್ಸ್ ನೀಡಿದ್ದಲ್ಲದೆ, ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿದ್ದರೂ, ನ್ಯಾಯಾಲಯದ ಮುಂದೆ ಆರೋಪಿಗಳು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿ ನ್ಯಾಯಾಲಯ ಆದೇಶಿಸಿತ್ತು. ಇದೀಗ ಪ್ರಕರಣ ನಡೆದು ಹನ್ನೊಂದು ಸುಮಾರು ಒಂಬತ್ತು ವರ್ಷಗಳ ಬಳಿಕ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಲ್ಲದೆ, ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ ಎಂದು ವರದಿಯಾಗಿದೆ.