ಪಾಟ್ನಾ, 29 (DaijiworldNews/DB): ಹೆಣ್ಣು ಮಕ್ಕಳಿಗೆ ಸರ್ಕಾರ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ನೀಡಲು ವ್ಯವಸ್ಥೆ ಮಾಡಬಹುದೇ ಎಂದು ಕೇಳಿದ ವಿದ್ಯಾರ್ಥಿನಿಯೊಬ್ಬಳಿಗೆ ನಾಳೆ ನೀವು ಕಡಿಮೆ ಬೆಲೆಯಲ್ಲಿ ಕಾಂಡೋಮ್ ಸಹ ಕೇಳಬಹುದು ಎಂದು ಐಎಎಸ್ ಅಧಿಕಾರಿಯೊಬ್ಬರು ಹೇಳಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಬಿಹಾರದ ಪಾಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ 'ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ' ಕಾರ್ಯಾಗಾರದಲ್ಲಿ ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಸರ್ಕಾರ 20-30 ರೂ. ಬೆಲೆಯಲ್ಲಿ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸಿದರೆ ಅನುಕೂಲ ಎಂದು ವಿದ್ಯಾರ್ಥಿನಿ ಮನವಿ ಮಾಡಿದಾಗ, ಸಿಟ್ಟುಗೊಂಡ ಭಮ್ರಾ, ನಾಳೆ ನಮಗೂ ಸರ್ಕಾರ ಜೀನ್ಸ್ ನೀಡಲಿ, ಒಳ್ಳೆಯ ಶೂ ನೀಡಲಿ ಎಂದೂ ನೀವು ಕೇಳಬಹುದು. ಅಷ್ಟೇ ಅಲ್ಲ, ಸರ್ಕಾರವೇ ಕಾಂಡೋಮ್ ನೀಡಲಿ ಎಂದೂ ಕೇಳಬಹುದು ಎಂದರು. ಇದಕ್ಕೆ ವಿದ್ಯಾರ್ಥಿನಿ ಆಕ್ಷೇಪಿಸಿದಾಗ ಭಮ್ರಾ ವಿದ್ಯಾರ್ಥಿನಿ ಮೇಲೆ ಕಿಡಿಕಾರಿದ ಪ್ರಸಂಗ ನಡೆಯಿತು.
ಸೇವೆ ಮಾಡಲಿ ಎಂದೇ ನಾವು ಮತ ನೀಡುವುದು ಎಂದು ವಿದ್ಯಾರ್ಥಿನಿ ಹೇಳಿದಾಗ, ಇದು ಮೂರ್ಖತನ. ಮತ ಹಾಕಬೇಡಿ, ಪಾಕಿಸ್ತಾನವಾಗಲಿ ಎಂದು ಭಮ್ರಾ ದರ್ಪ ತೋರಿದ್ದಾರೆ. ಆಗ ವಿದ್ಯಾರ್ಥಿನಿ, ಇದು ಭಾರತ, ನಾನು ಭಾರತೀಯಳು, ಇದು ಯಾಕೆ ಪಾಕಿಸ್ತಾನವಾಗಬೇಕು ಎಂದು ಮರು ಪ್ರಶ್ನೆ ಹಾಕಿದ್ದಾಳೆ.
ಇನ್ನು ವಿದ್ಯಾರ್ಥಿನಿಯ ಪ್ರಶ್ನೆಗೆ ಆಕ್ಷೇಪಾರ್ಹ ರೀತಿಯ ಹೇಳಿಕೆ ನೀಡಿದ ಐಎಎಸ್ ಅಧಿಕಾರಿಯ ವಿರುದ್ದ ರಾಷ್ಟ್ರೀಯ ಮಹಿಳಾ ಆಯೋಗ ಅಸಮಾಧಾನಗೊಂಡಿದ್ದು, ಸೂಕ್ತ ವಿವರಣೆ ನೀಡುವಂತೆ ಕೇಳಿಕೊಂಡಿದೆ.