ನವದೆಹಲಿ 29 (DaijiworldNews/DB): ಹೊಸ ಆತ್ಮವಿಶ್ವಾಸದೊಂದಿಗೆ ವಿಶ್ವ ವೇದಿಕೆಯಲ್ಲಿ ಭಾರತದ ಶಕ್ತಿ ಹೊರ ಹೊಮ್ಮುತ್ತಿದೆ. ಭಾರತವನ್ನು ಜಗತ್ತು ಹೊಸ ಅಭಿಮಾನದಿಂದ ನೋಡುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂತಹ ಸುಸಂದರ್ಭದಲ್ಲಿ ವಿದೇಶಿ ಸೇವೆಯಲ್ಲಿ ಅಧಿಕಾರಿಗಳು ವೃತ್ತಿ ಜೀವನ ಆರಂಭಿಸುತ್ತಿರುವುದು ಹೆಮ್ಮೆಯ ವಿಷಯವಾಘಿದೆ ಎಂದರು.
ನಮ್ಮ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂಬಂಧಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಉಪಕ್ರಮಗಳನ್ನು ಸೃಷ್ಟಿಸಿರುವುದು ದೇಶದ ದಿಕ್ಕನ್ನೇ ಬದಲಿಸಿದೆ. ಜಾಗತಿಕ ವೇದಿಕೆಗಳಲ್ಲಿ ನಿರ್ಣಾಯಕ ಮಧ್ಯಸ್ಥಿಕೆ ವಹಿಸಿದ ಹೆಗ್ಗಳಿಕೆಯೂ ಭಾರತದ್ದಾಗಿದೆ. ಭಾರತದ ನಾಯಕತ್ವವನ್ನು ಜಗತ್ತೇ ಕೊಂಡಾಡುತ್ತಿದೆ ಎಂದರು.
ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರ ಭಾರತ. ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ವಿಶ್ವದ ಪ್ರಮುಖ ಬಲಾಢ್ಯ ರಾಷ್ಟ್ರಗಳು ಕೊರೊನಾದಿಂದಾಗಿ ಕುಸಿದಿರುವ ಆರ್ಥಿಕತೆಯನ್ನು ಜಯಿಸಲು ಪ್ರಯತ್ನಿಸುತ್ತಿರುವಾಗ ಭಾರತ ಅದಾಗಲೇ ಇದನ್ನು ಜಯಿಸಿ ಎದ್ದು ನಿಂತಿದೆ ಎಂದವರು ಶ್ಲಾಘಿಸಿದರು.
ಭಾರತದ ವಿದೇಶಾಂಗ ಸೇವೆಯೂ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿದೆ. ಹೆಮ್ಮೆಯ ನಾಗರಿಕತೆ, ಪರಂಪರೆ, ಸಂಸ್ಕೃತಿಯನ್ನು ಜನಮಾನಸಕ್ಕೆ ತಲುಪಿಸುವಲ್ಲಿ ನಮ್ಮ ಪ್ರಯತ್ನ ದೊಡ್ಡದು ಎಂದವರು ಇದೇ ವೇಳೆ ತಿಳಿಸಿದರು.