ಧುಬ್ರಿ, ಸೆ 29 (DaijiworldNews/DB): ಅಸ್ಸಾಂನ ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ಬೋಟ್ವೊಂದು ಮಗುಚಿ ಬಿದ್ದು ಶಾಲಾ ವಿದ್ಯಾರ್ಥಿಗಳು ಸೇರಿ ಹಲವರು ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಬೋಟ್ನಲ್ಲಿ ಅಂದಾಜು 100 ಮಂದಿ ಭಶಾನಿಯತ್ತ ಪ್ರಯಾಣಿಸುತ್ತಿದ್ದರು. ಅಲ್ಲದೆ 10 ಮೋಟರ್ ಸೈಕಲ್ಗಳನ್ನು ಸಹ ಬೋಟ್ನಲ್ಲಿ ಒಯ್ಯಲಾಗುತ್ತಿತ್ತು. ಧುಬ್ರಿ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಅದಬಾರಿ ಸೇತುವೆಯ ಕಂಬಕ್ಕೆ ಬೋಟ್ ಢಿಕ್ಕಿಯಾಗಿ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆ ಮಾಹಿತಿ ಗೊತ್ತಾದ ಕೂಡಲೇ ರಕ್ಷಣಾ ಕಾಯಾಚರಣೆ ಸಿಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಈವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಕಾಯಾಚರಣೆ ಮುಂದುವರಿದಿದೆ. ಧುಬ್ರಿಯ ಸರ್ಕಲ್ ಆಫೀಸರ್ ಕೂಡಾ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ದೇಶೀಯ ನಿರ್ಮಿತ ಬೋಟ್ವೊಂದು ಬ್ರಹ್ಮಪುತ್ರ ನದಿಯಲ್ಲಿ ಮಗುಚಿ ಬಿದ್ದ ಪರಿಣಣಾಮ ಹಲವರು ನಾಪತ್ತೆಯಾಗಿದ್ದು, ಪತ್ತೆ ಹಾಗೂ ರಕ್ಷಣಾ ಕಾಯಾಚರಣೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿಯ ಸಿಇಒ ಜ್ಞಾನೇಂದ್ರ ದೇವ್ ತ್ರಿಪಾಠಿ ತಿಳಿಸಿದ್ದಾರೆ.