ನವದೆಹಲಿ, ಸೆ 29 (DaijiworldNews/DB): ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ನಂತರ ಅವರೊಂದಿಗೇ ಯಾತ್ರೆಯಲ್ಲಿ ಹೆಜ್ಜೆ ಹಾಕಲು ಅವಕಾಶ ಸಿಕ್ಕಿರುವುದಕ್ಕೆ ಬಾಲಕಿಯೊಬ್ಬಳು ಸಂಭ್ರಮಿಸಿದ್ದಾಳೆ. ಈ ಖುಷಿಯನ್ನು ನಿಯಂತ್ರಿಸಲಾಗದೆ ಕಣ್ಣೀರು ಹಾಕಿದ್ದಾಳೆ.
ಸದ್ಯ ಕೇರಳದಲ್ಲಿ ಯಾತ್ರೆ ನಡೆಯುತ್ತಿದ್ದು, ಈ ವೇಳೆ ಬಾಲಕಿಯೊಬ್ಬಳು ರಾಹುಲ್ ಗಾಂಧಿಯವರನ್ನು ನೋಡಲು, ಮಾತನಾಡಲು ಅನುಮತಿ ಕೇಳಿದ್ದಾಳೆ. ಇದಕ್ಕೆ ಅನುಮತಿಯೂ ಸಿಕ್ಕಿದ್ದು, ಬಾಲಕಿ ರಾಹುಲ್ ಗಾಂಧಿಯವರನ್ನು ನೋಡಿ ಸಂತೋಷದಿಂದ ಜಿಗಿಯುವುದು, ನಗುವುದು ಮಾಡುತ್ತಾ ಸಂಭ್ರಮಿಸಿದ್ದಾಳೆ. ಈ ವೇಳೆ ಬಾಲಕಿಯನ್ನು ತನ್ನೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕುವಂತೆ ರಾಹುಲ್ ಗಾಂಧಿ ಕೇಳಿಕೊಂಡಾಗ ಆಕೆಯ ಸಂತೋಷ ಮತ್ತಷ್ಟು ಹೆಚ್ಚಾಗಿ ತನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾಗದೆ ಖುಷಿಯಿಂದ ಕಣ್ಣೀರು ಹಾಕಿದ್ದಾಳೆ.
ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಇತರ ನಾಯಕರು ಆಕೆಯ ಉತ್ಸಾಹ ನೋಡಿ ಮುಗುಳ್ನಕ್ಕರು. ಬಳಿಕ ರಾಹುಲ್ ಗಾಂಧಿ ಆಕೆಯನ್ನು ತಬ್ಬಿ ಸಮಾಧಾನಪಡಿಸಿದರು. ಈ ವೀಡಿಯೋವನ್ನು ಪಕ್ಷದ ಭಾರತ್ ಜೋಡೋ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಶೀರ್ಷಿಕೆ ಅಗತ್ಯವಿಲ್ಲ. ಪ್ರೀತಿ ಮಾತ್ರ' ಎಂದು ಬರೆಯಲಾಗಿದೆ. ವೀಡಿಯೋ ನೋಡಿದ ಹಲವರು ಬಾಲಕಿಯ ಉತ್ಸಾಹಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.