ನವದೆಹಲಿ, ಸೆ 29 (DaijiworldNews/DB): ಫ್ಲೈ ಓವರ್ ಮೇಲೆ ಹುಟ್ಟುಹಬ್ಬ ಆಚರಿಸಿ ಗಲಾಟೆ ಉಂಟು ಮಾಡಿದ ಆರೋಪದ ಮೇಲೆ 21 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಎಂಟು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿಯ ಜಗತ್ ಪುರಿ ನಿವಾಸಿ ಅಂಶ್ ಕೊಹ್ಲಿ (21) ಎಂಬಾತನ ಹುಟ್ಟುಹಬ್ಬನ್ನು ನಗರದ ಎಲಿವೇಟೆಡ್ ರಸ್ತೆಯ ಫ್ಲೈ ಓವರ್ನಲ್ಲಿ ಆರೋಪಿಗಳು ಮಂಗಳವಾರ ಮಧ್ಯರಾತ್ರಿ ಆಚರಿಸಿದ್ದಾರೆ. ಈ ವೇಳೆ ಆರೋಪಿಗಳು ಕಂಠಿಪೂರ್ತಿ ಕುಡಿದಿದ್ದರು. ಅಲ್ಲದೆ ಕಾರಿನ ಬಾನೆಟ್ನಲ್ಲಿ ಕೇಕ್ ಕತ್ತರಿಸಿ ಜೋರಾಗಿ ಸಂಗೀತ ಹಾಕಿದ್ದರು ಎಂದು ಇಂದಿರಾಪುರಂ ಪೊಲೀಸರು ಗುರುವಾರ ತಿಳಿಸಿರುವುದಾಗಿ ವರದಿಯಾಗಿದೆ.
ಆರೋಪಿಗಳು ಎಂಟು ಕಾರುಗಳನ್ನು ತಂದು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರು. ಅಲ್ಲದೆ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ಪ್ರಯಾಣಿಕರಿಗೆ ತೀರಾ ಸಂಕಷ್ಟ ಎದುರಾಗಿತ್ತು. ಪ್ರಶ್ನಿಸಿದ ಪ್ರಯಾಣಿಕರಿಗೆ ಅಸಭ್ಯವಾಗಿ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ 21 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಸಿಟಿ (ಎರಡನೇ) ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ.