ನವದೆಹಲಿ, ಸೆ 29 (DaijiworldNews/DB): ಕಾನೂನುಬದ್ದ ಗರ್ಭಪಾತ ಮಾಡಿಸಿಕೊಳ್ಳಲು ವಿವಾಹಿತ, ಅವಿವಾಹಿತ ಸೇರಿದಂತೆ ಎಲ್ಲಾ ಮಹಿಳೆಯರು ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ ಪ್ರಕಾರ ಮಹಿಳೆ ವಿವಾಹಿತಳಾಗಿದ್ದರೂ, ಅವಿವಾಹಿತಳಾಗಿದ್ದರೂ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಹೊಂದುತ್ತಾಳೆ. 24 ವಾರಗಳ ಗರ್ಭಧಾರಣೆಯನ್ನು ಗರ್ಭಪಾತ ಮಾಡಿಸಿಕೊಳ್ಳಲು ನಿಯಮ ಪ್ರಕಾರ ಅವಕಾಶವಿದೆ. 20ರಿಂದ 24 ವಾರಗಳ ನಡುವೆ ಗರ್ಭಪಾತಕ್ಕೆ ಅವಕಾಶ ನೀಡದಿರುವುದು ಕಲಂ 14ರ ಅನ್ವಯ ಕಾನೂನುಬಾಹಿರವಾಗುತ್ತದೆ. ಹೀಗಾಗಿ ಕಾನೂನುಬದ್ದವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಎಲ್ಲಾ ಮಹಿಳೆಯರು ಅರ್ಹರು. ಅವರಿಗೆ ಅವಕಾಶ ನಿರಾಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಬಲವಂತದ ಗರ್ಭಪಾತವನ್ನು ಯಾರೂ ಮಾಡಿಸುವಂತಿಲ್ಲ. ಒಂದು ವೇಳೆ ವಿವಾಹಿತ ಮಹಿಳೆಗೆ ಬಲವಂತದಿಂದ ಗರ್ಭಪಾತ ಮಾಡಿಸಿದಲ್ಲಿ ಇದನ್ನು ಅತ್ಯಾಚಾರವೆಂದು ಪರಿಗಣಿಸಬಹುದು ಎಂದೂ ಈ ವೇಳೆ ಕೋರ್ಟ್ ತಿಳಿಸಿದೆ.