ನವದೆಹಲಿ, ಸೆ 29 (DaijiworldNews/DB): ರಾಜಸ್ಥಾನದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟು ಇಲ್ಲ. ಗೊಂದಲಗಳೆಲ್ಲ ಮುಂದಿನ ಎರಡು ದಿನಗಳಲ್ಲಿ ಬಗೆಹರಿಯಲಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿ ನೇಮಕದ ಕುರಿತು ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಬಿಕ್ಕಟ್ಟುಗಳು ರಾಜಸ್ಥಾನ ಕಾಂಗ್ರೆಸ್ನಲ್ಲಿ ಎದುರಾಗಿಲ್ಲ. ಕೆಲವು ಗೊಂದಲಗಳನ್ನು ನಿವಾರಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಎರಡು ದಿನಗಗಳೊಳಗೆ ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಗೆಹ್ಲೋಟ್ ಆಯ್ಕೆಯಾಗಿ ದೆಹಲಿಗೆ ತೆರಳಿದಲ್ಲಿ ಸಚಿನ್ ಪೈಲಟ್ ಅವರನ್ನು ರಾಜಸ್ಥಾನ ಸಿಎಂ ಆಗಿ ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿತ್ತು. ಆದರೆ ಗೆಹ್ಲೋಟ್ ಪರ ಶಾಸಕರು ಸಚಿನ್ ಪೈಲಟ್ ನೇಮಕದ ವಿರುದ್ದ ಬಂಡಾಯವೆದ್ದ ಹಿನ್ನೆಲೆಯಲ್ಲಿ ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಎದುರಾಗಿತ್ತು.
ರಾಜಸ್ಥಾನದಲ್ಲಿ ಗೆಹ್ಲೋಟ್ ಅವರನ್ನು ಬೆಂಬಲಿಸಿ ಪಕ್ಷದ ನಾಯಕತ್ವದ ವಿರುದ್ಧ ನಾಲ್ಕೈದು ಶಾಸಕರು ಬಂಡಾಯವೆದ್ದಿದ್ದಾರೆ. ಬಂಡಾಯವೆದ್ದ ಶಾಸಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹೇಳಿದ್ದಾರೆ ಎಂದು ವರದಿಯಾಗಿದೆ.