ಬೆಂಗಳೂರು, ಸೆ 29 (DaijiworldNews/MS): ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೋ ಯಾತ್ರೆ' ನಾಳೆ ಕರ್ನಾಟಕ ರಾಜ್ಯವನ್ನು ಪ್ರವೇಶಿಸಲಿದೆ. ಈ ಯಾತ್ರೆ ರಾಜ್ಯದಲ್ಲಿ 21 ದಿನಗಳ ಕಾಲ ಸುಮಾರು ಎಂಟು ಜಿಲ್ಲೆಗಳ ಮೂಲಕ 511 ಕಿ.ಮೀ. ದೂರ ಯಾತ್ರೆ ಸಂಚರಿಸಲಿದೆ.
ಭಾರತ್ ಜೋಡೋ ಯಾತ್ರೆಯು ಸೆ.30ರಂದು ಚಾಮರಾಜನಗರ ಜಿಲ್ಲೆಯ ಮೂಲಕ ರಾಜ್ಯ ಪ್ರವೇಶಿಸಿ, ಅ.19ರಂದು ರಾಯಚೂರು ಮೂಲಕ ತೆಲಂಗಾಣಕ್ಕೆ ತೆರಳಲಿದೆ.ಯಾತ್ರೆ ರಾಜ್ಯ ಪ್ರವೇಶಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರನ್ನು ಅದ್ಧೂರಿ ಸ್ವಾಗತದೊಂದಿಗೆ ಎದುರುಗೊಳ್ಳಲು ಈಗಾಗಲೇ ಅಗತ್ಯ ಸಿದ್ಧತೆ ಆರಂಭವಾಗಿದೆ. ರಾಹುಲ್ ಗಾಂಧಿ ಅವರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವು ನಾಯಕರು ಹೆಜ್ಜೆ ಹಾಕಲಿದ್ದಾರೆ.
ಸುಮಾರು 25 ರಿಂದ 30 ಸಾವಿರಕ್ಕೂ ಅಧಿಕ ಮಂದಿ ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಚಾಮರಾಜನಗರ ಜಿಲ್ಲೆಯ ಬಳಿಕ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಬಳ್ಳಾರಿ ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರಗಳ ಮೂಲಕ ಯಾತ್ರೆ ಸಂಚರಿಸಲಿದೆ. ಆಯಾ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸುವಾಗ ಸುತ್ತಮುತ್ತಲ ಕ್ಷೇತ್ರಗಳ ಪಕ್ಷದ ಶಾಸಕರು, ನಾಯಕರು, ಮುಖಂಡರು, ಕಾರ್ಯಕರ್ತರು ಭಾಗಿಯಾಗುವಂತೆ ಕೆಪಿಸಿಸಿ ಈಗಾಗಲೇ ಸ್ಪಷ್ಟ ಸೂಚನೆ ನೀಡಿದೆ.