ಬೆಂಗಳೂರು, ಸೆ 29 (DaijiworldNews/DB): ಮಾಜಿ ಸ್ಪೀಕರ್ ರಮೇಶ್ಕುಮಾರ್ ವಿರುದ್ದ ಮುನಿಸಿಕೊಂಡಿರುವ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರು ಪರೋಕ್ಷವಾಗಿ ಪಕ್ಷ ತೊರೆಯುವ ಬಗ್ಗೆ ನಿಲುವು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರ ನಿಯೋಗ ಮುನಿಯಪ್ಪ ನಿವಾಸಕ್ಕೆ ತೆರಳಿ ಬುಧವಾರ ಮಾತುಕತೆ ನಡೆಸಿದೆ.
ಪಕ್ಷದ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನೊಳಗೊಂಡ ನಿಯೋಗವು ಬೆಂಗಳೂರಿನ ಸಂಜಯನಗರದಲ್ಲಿರುವ ಮುನಿಯಪ್ಪ ನಿವಾಸಕ್ಕೆ ತೆರಳಿ ಬಂಡಾಯ ಶಮನಕ್ಕೆ ಮಾತುಕತೆ ನಡೆಸಿದರು. ಈ ವೇಳೆ ರಮೇಶ್ಕುಮಾರ್ ಬಗ್ಗೆ ಹೈಕಮಾಂಡ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷಕ್ಕೆ ಕೆಲವರನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂದು ಮುನಿಯಪ್ಪ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮುನಿಯಪ್ಪರನ್ನು ಸಮಾಧಾನಪಡಿಸಿದ ಇಬ್ಬರು ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ. ಆದರೆ ಇದಕ್ಕೆ ಮುನಿಯಪ್ಪ ಏನು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಕಳೆದ ವಾರ ಮಾತನಾಡಿದ್ದ ಮುನಿಯಪ್ಪ, ಯಾತ್ರೆಯಲ್ಲಿ ಭಾಗವಹಿಸುತ್ತೇನೆ. ಎಲ್ಲಿ ಸೇರಬೇಕು ಎನ್ನುವುದನ್ನು ಪಕ್ಷದ ನಾಯಕರು ಹೇಳುತ್ತಾರೆ. ಅವರು ಹೇಳಿದ್ದಲ್ಲಿ ಹೋಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.
ಈ ನಡುವೆ ಮುನಿಯಪ್ಪ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಎರಡು ಬಾರಿ ಅವರನ್ನು ಭೇಟಿಯಾಗಿದ್ದಾರೆ. ಇದರಿಂದ ಮುನಿಯಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ಗುಸುಗುಸು ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಹಿರಿಯ ನಾಯಕರು ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಮುನಿಯಪ್ಪ, ನಾವಿಬ್ಬರು ನಾಲ್ಕು ದಶಕಗಳಿಂದಲೂ ಪರಿಚಿತರು. ಅವರನ್ನು ಇತ್ತೀಚೆಗೆ ಕೆಲವೊಂದು ಕೆಲಸಗಳ ಕಾರಣಕ್ಕಾಗಿ ಭೇಟಿಯಾಗಿದ್ದೇನೆಯೇ ಹೊರತು, ರಾಜಕೀಯ ವಿಚಾರದ ಚರ್ಚೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.