ಚಿತ್ರದುರ್ಗ, ಸೆ 29 (DaijiworldNews/MS): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘರಾ ಜೇಂದ್ರ ಬೃಹನ್ಮಠದ ಶಿವಮೂರ್ತಿ ಶ್ರೀಗಳ ಪೀಠ ತ್ಯಾಗಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪೀಠ ಬಿಡದೆ ಇರುವ ಹಿನ್ನೆಲೆಯಲ್ಲಿ, ಮಠದ ಮುಂದಿನ ಭವಿಷ್ಯದ ಕುರಿತು ಚರ್ಚಿಸಲು ಸೆ.29ರಂದು ಸಭೆ ಕರೆಯಲಾಗಿದೆ.
ಇನ್ನೊಂದೆಡೆ ಶಿವಮೂರ್ತಿಗಳಿಗೆ ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪೋಕ್ಸೋದಂತಹ ಗಂಭೀರ ಅಪರಾಧ ಪ್ರಕರಣದಲ್ಲಿ ಬಂಧಿತರಾಗಿ ತಿಂಗಳೂ ಕಳೆದರೂ ಈವರೆಗೆ ಅವರು ಪೀಠತ್ಯಾಗ ಮಾಡದ ಹಿನ್ನಲೆಯಲ್ಲಿ ಪೀಠದ ವಿಷಯದಲ್ಲಿ ಮುಂದೇನು ಎನ್ನುವ ಪ್ರಶ್ನೆ ಲಿಂಗಾಯಿತ ಮುಂಖಂಡರಿಗೆ ಕಾಡುತ್ತಿದ್ದು, ಆ ಆತಂಕ ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಚಿತ್ರದುರ್ಗದ ಸೀಬಾರದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಸಮಾಧಿಯ ಬಳಿ ಸಭೆ ಸೇರಲು ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.
ಲಿಂಗಾಯಿತ ಸಮುದಾಯದ ಮುಖಂಡರಾದ ಜಿ.ವಿ ರುದ್ರಪ್ಪ, ಎಂ.ಬಿ ತಿಪ್ಪೇರುದ್ರಪ್ಪ, ಎಂ.ಟಿ ಮಲ್ಲಿಕಾರ್ಜುನ ಸ್ವಾಮಿ, ಕೆ.ವಿ ಪ್ರಭಾಕರ್ ಮತ್ತು ಎಸ್. ಷಣ್ಮುಗಪ್ಪ ಎಂಬುವವರು ಸಮಾಜ ಬಾಂಧವರಿಗೆ ಪತ್ರ ಬರೆದು, ಮಠದ ಭವಿಷ್ಯದ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ಹೇಳಿದ್ದಾರೆ.
ಸಭೆಯಲಿ ಶ್ರೀಗಳ ಪೀಠತ್ಯಾಗಕ್ಕೆ ಆಗ್ರಹಿಸಿ ಹೋರಾಟದ ಬಗ್ಗೆ ಚರ್ಚೆ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.