ಬೆಂಗಳೂರು, ಸೆ 28 (DaijiworldNews/SM): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಿಬಿಐ ಹಾಗೂ ಇಡಿ ಶಾಕ್ ತಪ್ಪಿದಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ಸಂದರ್ಭದಲ್ಲಿ ಶಾಕ್ ನೀಡುತ್ತಲೇ ಇದೆ. ಅತ್ತ ರಾಹುಲ್ಗಾಂದಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸ್ವಾಗತದ ಸಿದ್ಧತೆಯಲ್ಲಿರುವ ಸಂದರ್ಭದಲ್ಲೇ ಸಿಬಿಐ ದಾಳಿಗೆ ತೀಕ್ಷ್ಣವಾಗಿ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಸಿಬಿಐ ಅಧಿಕಾರಿಗಳಿಗೆ ಪ್ರೀತಿ ಜಾಸ್ತಿ ಈ ಕಾರಣದಿಂದಾಗಿ ಆಗಾಗ್ಗೆ ನನ್ನಲ್ಲಿಗೆ ಅವರು ಬರುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಬಿಐ ಅಧಿಕಾರಿಗಳ ದಾಳಿ ಕುರಿತು, ನನ್ನ ಮೇಲೆ ಅವರಿಗೆ ಪ್ರೀತಿ ಜಾಸ್ತಿ ಇರುವುದರಿಂದ ಆಗಾಗ್ಗೆ ಬರುತ್ತಿರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು ಈಗಾಗಲೇ ಎಲ್ಲ ದಾಖಲೆ ಕೊಟ್ಟಿದ್ದೇನೆ. ಆದರೂ ತಹಶೀಲ್ದಾರ್ ಜತೆಗೆ ಬಂದು ಊರಿನಲ್ಲಿರುವ ಆಸ್ತಿಗಳನ್ನು ಸಿಬಿಐ ಅಧಿಕಾರಿಗಳು ಪರಿಶೀಲಿಸಿದ್ದಾರೆ. ನನಗೆ ತುಂಬಾ ನೋವಿದೆ. ದಾಳಿಯ ಬಗ್ಗೆ ಬೇರೆಯೇ ಮಾಹಿತಿ ಇದೆ. ಮುಂದೆ ಮಾತನಾಡುತ್ತೇನೆ. ಇಂತಹ ಯಾವುದೇ ದಾಳಿಗೆ ವಿಚಲಿತನಾಗುವುದಿಲ್ಲ ಎಂದು ಹೇಳಿದ್ದಾರೆ.
ಕನಕಪುರ, ತೋಟದ ಮನೆಗಳಲ್ಲಿರುವ ಆಸ್ತಿಗಳನ್ನು ನೋಡಿಕೊಂಡು ಹೋಗಿದ್ದಾರೆ ಎಂಬ ವಿಚಾರವನ್ನು ಅಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಿಬ್ಬಂದಿ ಹೇಳಿದ್ದಾರೆ. ನಮ್ಮನ್ನು ಅವರು ಬಹಳ ಪ್ರೀತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.