ನವದೆಹಲಿ,ಸೆ 28 (DaijiworldNews/SM): ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಗೆ ಕೇಂದ್ರ ಸರ್ಕಾರ ಸೆ.28 ರಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು.
ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಡಿಜಿಎಂಒ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದು, ಪೂರ್ವ ಕಮಾಂಡ್ ನ ಜಿಒಸಿ0-ಇನ್-ಸಿ (ಜನರಲ್ ಆಫೀಸರ್ ಕಮಾಂಡರ್-ಇನ್-ಚೀಫ್) ಹುದ್ದೆಯಲ್ಲಿ ನಿವೃತ್ತರಾಗಿದ್ದರು. ಸೇನಾ ಭಾಷೆಯಲ್ಲಿ ಹೇಳಬೇಕೆಂದರೆ ಅವರು ಈಸ್ಟರ್ನ್ ಆರ್ಮಿ ಕಮಾಂಡರ್ ಆಗಿದ್ದವರು.
ಸೇನೆಯ ಎರಡು ಅತ್ಯಂತ ಸೂಕ್ಷ್ಮ ಕಮಾಂಡ್ ಗಳ ಪೈಕಿ ಈಸ್ಟರ್ನ್ ಆರ್ಮಿಯೂ ಒಂದಾಗಿದೆ. ಅನಿಲ್ ಚೌಹಾಣ್ ಅವರು 2021 ರ ಮೇ.31 ರಂದು ನಿವೃತ್ತರಾಗಿದ್ದರು.
ಮೂರೂ ಸೇನಾ ಮುಖ್ಯಸ್ಥರಿಗೂ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಹಿರಿಯರಾಗಿದ್ದು, ಸೇವಾ ಹಿರಿತನದ ಸಂಬಂಧ ಯಾರಿಗೂ ಸಮಸ್ಯೆ ಇರುವುದಿಲ್ಲ. ಪ್ರಸ್ತುತ ಅವರು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಅತ್ಯುತ್ತಮ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ. ಅನಿಲ್ ಚೌಹಾಣ್ ಬಿಪಿನ್ ರಾವತ್ ಅವರಂತೆಯೇ 11 ನೇ ಗೂರ್ಖಾ ರೈಫಲ್ಸ್ ನಿಂದ ಬಂದವರಾಗಿದ್ದು, ಇಬ್ಬರೂ ಉತ್ತರಾಖಂಡ್ ನವರೇ ಆಗಿದ್ದಾರೆ.