ಭೋಪಾಲ್, ಸೆ 28 (DaijiworldNews/DB): ಮಹಿಳೆಯೊಬ್ಬಳು ತನ್ನ 16 ದಿನದ ಅವಳಿ ಗಂಡು ಮಕ್ಕಳನ್ನು ಕತ್ತು ಹಿಸುಕಿ ಕೊಲೆಗೈದು ನಿರ್ಜನ ಸ್ಥಳದಲ್ಲಿ ಶವಗಳನ್ನು ಎಸೆದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಸಪ್ನಾ ಧಾಕಡ್ ಅವಳಿ ಮಕ್ಕಳನ್ನು ಕೊಂದ ಪಾಪಿ ತಾಯಿ. ಸಪ್ನಾಳ ಪತಿ ಕುಡಿತದ ದಾಸನಾಗಿದ್ದು, ಕೆಲಸವಿಲ್ಲದೆ ತಿರುಗಾಡುತ್ತಿದ್ದ. ಇದರಿಂದ ಅವಳಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾಳೆಂದು ಆಕೆಯ ಅತ್ತೆಯರು ನಿಂದಿಸಿದ್ದರು. ನಿಂದನೆಯನ್ನು ಸಹಿಸದೆ ತನ್ನ ನವಜಾತ ಮಕ್ಕಳನ್ನೇ ಆಕೆ ಹತ್ಯೆಗೈದಿದ್ದಾಳೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಸೆಪ್ಟೆಂಬರ್ 23ರಂದು ಘಟನೆ ನಡೆದಿದ್ದು, ಮಕ್ಕಳನ್ನು ಕೊಂದು, ಬಂಗಂಗಾ ಪ್ರದೇಶದ ಕಾಲುದಾರಿಯಲ್ಲಿ ಮಕ್ಕಳು ನಾಪತ್ತೆಯಾಗಿದ್ದಾರೆಂದು ಕತೆ ಕಟ್ಟಿ ದೂರು ನೀಡಿದ್ದಳು. ಪೊಲೀಸರು ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಿಜಾಂಶ ಗೊತ್ತಾಗಿದೆ. ಬಳಿಕ ಆಕೆಯನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದು, ಅವಳಿ ಶಿಶುಗಳನ್ನು ಕತ್ತು ಹಿಸುಕಿ ಕೊಂದು ಹಬೀಬ್ಗಂಜ್ ಪ್ರದೇಶದ ನಿರ್ಜನ ಸ್ಥಳದಲ್ಲಿ ಎಸೆದಿದ್ದೇನೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.