ನವದೆಹಲಿ, ಸೆ 28 (DaijiworldNews/DB): ರಾಜಕೀಯ ಲಾಭಕ್ಕಾಗಿ ಕೆಲವು ಪಕ್ಷಗಳು ತೀರಾ ಕೆಳಮಟ್ಟಕ್ಕೆ ಇಳಿದಿವೆ. ದೇಶದಲ್ಲಿ ವಿಶ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಸಂಘಟನೆಗಳ ಗುರಾಣಿಯಂತೆ ಆ ಪಕ್ಷಗಳು ವರ್ತಿಸುತ್ತಿವೆ ಎಂದು ಬಿಜೆಪಿಯ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (ಪಿಎಫ್ಐ) ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿದ್ದರೆ ಅಂತಹವರಿಗೆ ಉಳಿಗಾಲವಿಲ್ಲ ಎಂಬುದು ಸಾಬೀತಾಗಿದೆ. ಭಾರತ ವಿರೋಧಿ ಶಕ್ತಿಗಳಿಗೆ ಇಲ್ಲಿ ಖಂಡಿತಾ ಅವಕಾಶವಿಲ್ಲ. ಕೆಲವು ರಾಜಕೀಯ ಪಕ್ಷಗಳು ಮತ್ತು ಪ್ರಭಾವಶಾಲಿಗಳು ಇಂತಹ ಶಕ್ತಿಗಳಿಗೆ ರಕ್ಷಣೆ ನೀಡುವುದು ವಿಷಾದನೀಯವಾಗಿದೆ ಎಂದರು.
ಸೌಹಾರ್ದ ಮತ್ತು ಸುಭದ್ರತೆಯೇ ನಮ್ಮ ದೇಶದ ಶಕ್ತಿ. ಭಾರತ ವಿರೋಧಿಗಳ ನಿದ್ದೆಗೆಡಿಸಲು ಈ ಶಕ್ತಿ ಕೆಲಸ ಮಾಡುತ್ತಿದೆ. ಧರ್ಮವನ್ನೇ ರಕ್ಷಾಕವಚವಾಗಿಸಿಕೊಂಡು ದೇಶದ ಸೌಹಾರ್ದಕ್ಕೆ ಧಕ್ಕೆ ತರುವ ಶಕ್ತಿಗಳಿಗೆ ಎಂದೂ ಇಲ್ಲಿ ಜಾಗವಿಲ್ಲ ಎಂದು ಪ್ರತಿಪಾದಿಸಿದರು.
ದೇಶವಿರೋಧಿ ಶಕ್ತಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಂಡಾಗ ರಾಜಕೀಯ ಉದ್ದೇಶಕ್ಕಾಗಿ ಕೆಲವರು ಆ ಶಕ್ತಿಗಳನ್ನು ಬೆಂಬಲಿಸುವುದು ದುರದೃಷ್ಟಕರ. ದೇಶ ಮತ್ತು ಇಲ್ಲಿನ ಜನರ ರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಬದ್ದವಾಗಿದೆ ಎಂದರು.