ನವದೆಹಲಿ, ಸೆ 28 (DaijiworldNews/DB): ನಮೀಬಿಯಾದಿಂದ ಭಾರತದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿರುವ ಚೀತಾಗಳಿಗೆ ವಿಶೇಷ ಭದ್ರತೆ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಸ್ಪೆಷಲ್ ಡಾಗ್ ಸ್ಕ್ವಾಡ್ನ್ನೂ ತಯಾರಿಸಲಾಗುತ್ತಿದೆ.
ಚೀತಾಗಳಿಗೆ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಶ್ವಾನಗಳಿಗೆ ವಿಶೇಷ ತರಬೇತಿ ನೀಡಿ ಡಾಗ್ ಸ್ಕ್ವಾಡ್ನ್ನೂ ಕಣ್ಗಾವಲಿಗೆ ಕಳುಹಿಸಲು ಕೆಲಸಗಳಾಗುತ್ತಿವೆ. ಕಳ್ಳ ಬೇಟೆಗಾರರಿಂದ ಅವುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ ರಾಷ್ಟ್ರೀಯ ಶ್ವಾನಗಳ ತರಬೇತಿ ಕೇಂದ್ರದಲ್ಲಿ ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಇಂಡಿಯಾ) ಸಹಯೋಗದೊಂದಿಗೆ ಜರ್ಮನ್ ಶೆಪರ್ಡ್ ತಳಿಯ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಹರಿಯಾಣದ ಪಂಚಕುಲದಲ್ಲಿರುವ ಶ್ವಾನಗಳು ಈ ವಿಶೇಷ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ತರಬೇತಿ ಪಡೆಯುತ್ತಿವೆ ಎಂದು ಐಟಿಬಿಪಿಯ ಮೂಲ ತರಬೇತಿ ಕೇಂದ್ರದ ಐಜಿ ಈಶ್ವರ್ ಸಿಂಗ್ ದುಹಾನ್ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಏಳು ತಿಂಗಳ ಸುದೀರ್ಘ ಅವಧಿಯ ತರಬೇತಿ ಇದಾಗಿದೆ.
ಭಾರತದಲ್ಲಿ ಅಳಿವಿನಂಚಿನಲ್ಲಿರುವ ಚೀತಾಗಳನ್ನು ಮರು ಪರಿಷಯಿಸುವ ಉದ್ದೇಶದಿಂದ ನಮೀಬಿಯಾದಿಂದ ಚೀತಾಗಳನ್ನು ತರಿಸಲಾಗಿತ್ತು. ಅವುಗಳಿಗೆ ಬಿಗು ಭದ್ರತೆ ಕಲ್ಪಿಸುವ ಉದ್ದೇಶದಿಂದ ನಿರಂತರ ಕಣ್ಗಾವಲು, ಉಪಗ್ರಹ ಕೊರಳುಪಟ್ಟಿಯನ್ನು ಹಾಕುವುದು ಸೇರಿದಂತೆ ಹಲವು ಪ್ರಯತ್ನಗಳು ನಡೆಯುತ್ತಿವೆಹುಲಿ ಕಾರ್ಯಾಚರಣೆಯಲ್ಲಿ ಸಿದ್ದಹಸ್ತರಾಗಿರುವ ಎರಡು ಆನೆಗಳಿರುವ ಗಸ್ತು ತಂಡವನ್ನೂ ಚೀತಾಗಳ ಭದ್ರತೆಗೆ ನಿಯೋಜಿಸಲಾಗಿದೆ.