ಚೆನ್ನೈ, ಸೆ 28 (DaijiworldNews/DB): ಕಾಲಿವುಡ್ ನಟ ವಿಶಾಲ್ ಅವರ ಚೆನ್ನೈನ ಅಣ್ಣಾ ನಗರದಲ್ಲಿರುವ ಮನೆ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಮನೆಯಲ್ಲಿ ಹೆತ್ತವರೊಂದಿಗೆ ವಿಶಾಲ್ ವಾಸವಾಗಿದ್ದಾರೆ. ದುಷ್ಕರ್ಮಿಗಳು ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದು, ಏಕಾಏಕಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ವಿಶಾಲ್ ಅವರ ಮ್ಯಾನೇಜರ್ ಹರಿಕೃಷ್ಣನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾಲಿವುಡ್ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ ವಿಶಾಲ್, ನಾಡಿಗರ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರ ಮನೆ ಮೇಲೆ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆಯಿಂದಷ್ಟೇ ಘಟನೆಗೆ ಕಾರಣವೇನೆಂದು ತಿಳಿದು ಬರಬೇಕಿದೆ ಎಂದು ವರದಿಯಾಗಿದೆ.