ತಮಿಳುನಾಡು, ಸೆ 28 (DaijiworldNews/DB): ತಮಿಳುನಾಡಿನ ದಿನಗೂಲಿ ಪೋಷಕರ ಪುತ್ರಿ ಮಿಸ್ ತಮಿಳುನಾಡು ಪ್ರಶಸ್ತಿ ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ.
ಚೆಂಗಲ್ಪೇಟ್ ಜಿಲ್ಲೆಯ ದಿನಗೂಲಿ ಪೋಷಕರ ಮಗಳು 20 ವರ್ಷದ ಯುವತಿ ಫಾರೆವರ್ ಸ್ಟಾರ್ ಇಂಡಿಯಾ ಅವಾರ್ಡ್ಸ್ ನಡೆಸಿದ 'ಮಿಸ್ ತಮಿಳುನಾಡು' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಚೆಂಗಲ್ಪೇಟ್ ಜಿಲ್ಲೆಯ ತಿರುಕಲುಕುಂದ್ರಂನ ಕಟ್ಟಡ ಕಾರ್ಮಿಕ ಮನೋಹರ್ ಅವರ ಪುತ್ರಿ ರಕ್ಷಯಾ ಎಂಬಾಕೆಯೇ ಮಿಸ್ ತಮಿಳುನಾಡು ಪ್ರಶಸ್ತಿ ಗೆದ್ದು ಸಾಧನೆ ಮಾಡಿದಾಕೆ. ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬುದು ರಕ್ಷಯಾಳ ಬಾಲ್ಯದ ಕನಸಾಗಿತ್ತು. ಕಾಲೇಜು ಮುಗಿಸಿದ ಬಳಿಕ ಅರೆಕಾಲಿಕ ಉದ್ಯೋಗ ನಿರ್ವಹಿಸಿಕೊಂಡು ಸೌಂದರ್ಯ ಸ್ಪರ್ಧೆಗಾಗಿ ರಕ್ಷಯಾ ಸಿದ್ದತೆ ನಡೆಸುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ಫಾರೆವರ್ ಸ್ಟಾರ್ ಇಂಡಿಯಾ ನಡೆಸಿದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಅವರು ಅಲ್ಲಿ ಗೆಲುವು ಸಾಧಿಸಿದರು. ಬಳಿಕ ಮಿಸ್ ತಮಿಳುನಾಡು ಸ್ಪರ್ಧೆಯಲ್ಲಿ ಎದುರಾಳಿಗಳನ್ನೆಲ್ಲಾ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಮಿಸ್ ಇಂಡಿಯಾ ಸ್ಪರ್ಧೆ ಈ ವರ್ಷಾಂತ್ಯದಲ್ಲಿ ನಡೆಯಲಿದ್ದು, ರಕ್ಷಯಾ ಪಾಲ್ಗೊಳ್ಳಲಿದ್ದಾರೆ. ಮಿಸ್ ತಮಿಳುನಾಡು ಪ್ರಶಸ್ತಿ ಗೆದ್ದ ಅವರು, ಮಿಸ್ ಇಂಡಿಯಾ ಗೆಲುವಿಗೆ ಶ್ರಮಿಸುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು ಮಗಳ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಕ್ಷಯಾ ಪೋಷಕರು, ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದ ಆಕೆ, ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬ ಕನಸು ಕಂಡಿದ್ದಳು. ಕಾರ್ಯಕ್ರಮವೊಂದರ ನಿರೂಪಕಿಯಾಗುವ ಅವಕಾಶ ಪಡೆದುಕೊಂಡಾಗ ನಾವೆಲ್ಲರೂ ಆಕೆಯನ್ನು ಬೆಂಬಲಿಸಿದ್ದೆವು. ಇದೀಗ ಮಿಸ್ ತಮಿಳುನಾಡು ಪ್ರಶಸ್ತಿ ಗೆಲ್ಲುವ ಮೂಲಕ ಆಕೆ ತನ್ನ ಕನಸನ್ನು ನನಸಾಗಿಸಿಕೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.