ಚಿಕ್ಕಮಗಳೂರು, ಸೆ 27 (DaijiworldNews/HR): ಆರೆಸ್ಸೆಸ್ ಮುಖಂಡರೊಬ್ಬರ ಕಾರಿನಲ್ಲಿ ದುಷ್ಕರ್ಮಿಗಳು 'ಕಿಲ್ ಯೂ', 'ಜಿಹಾದ್' ಎಂದು ಬರೆದು ಜೀವ ಬೆದರಿಕೆ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಆರ್ಎಸ್ಎಸ್ ಧರ್ಮ ಜಾಗರಣ ಸಂಚಾಲಕ ಡಾ.ಶಶಿಧರ ಅವರಿಗೆ ಬೆದರಿಕೆ ಹಾಕಲಾಗಿದ್ದು, ಶಶಿಧರ ವ್ಯಾಪಾರ ಮಾಡುತ್ತಿದ್ದು, ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಶಶಿಧರ ಅವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳನ್ನು ದುಷ್ಕರ್ಮಿಗಳು ಪಂಕ್ಚರ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಕಾರುಗಳು ನಿಂತಿದ್ದರೂ ದುಷ್ಕರ್ಮಿಗಳು ಆರ್ಎಸ್ಎಸ್ ಮುಖಂಡರ ವಾಹನವನ್ನೇ ಆಯ್ಕೆ ಮಾಡಿದ್ದು, ಘಟನೆಯಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಇದು ರಾಜ್ಯದಲ್ಲಿನ ಪಿಎಫ್ಐ ನಾಯಕರ ಮೇಲೆ ಮಾಡಿರುವ ಎನ್ಐಎ ದಾಳಿಗೆ ಪ್ರತಿಕ್ರಿಯೆಯಾಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.