ನವದೆಹಲಿ, ಸೆ 27 (DaijiworldNews/MS): ವಿಶ್ವವಿಖ್ಯಾತ ತಾಜ್ ಮಹಲ್ನ 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿರುವ ಹಿರಿಯ ವಕೀಲ ಎಡಿಎನ್ ರಾವ್ ಅವರು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರು ಪೀಠದ ಮುಂದೆ ತಾಜ್ ಮಹಲ್ ಬಳಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಬೇಕು ಎಂದು ಸಲ್ಲಿಸಿದ್ದರು. ಸ್ಮಾರಕದ 500 ಮೀಟರ್ ಸುತ್ತಮುತ್ತ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು.
ಸಮಾಧಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿದ್ದು ಮೇ 2000 ರಲ್ಲಿ ಇದೇ ರೀತಿಯ ಆದೇಶವನ್ನು ನೀಡಲಾಗಿತ್ತು ಆದರೆ, ಸಮಯದ ದೀರ್ಘಾವಧಿಯ ದೃಷ್ಟಿಯಿಂದ ಆ ನಿರ್ದೇಶನವನ್ನು ಪುನರುಚ್ಚರಿಸುವುದು ಸೂಕ್ತವಾಗಿದೆ ಎಂದು ವಕೀಲ ರಾವ್ ಹೇಳಿದರು. ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ತಾಜ್ ಮಹಲ್ನ 500 ಮೀಟರ್ ವ್ಯಾಪ್ತಿಯನ್ನು ತಕ್ಷಣವೇ ಎಲ್ಲಾ ವಾಣಿಜ್ಯ ವಹಿವಾಟು ತೆರವುಗೊಳಿಸಲು ನಿರ್ದೇಶಿಸಿದೆ.
ಹಿರಿಯ ವಕೀಲರ ಮಾತಿಗೆ ಸಮ್ಮತಿಸಿದ ನ್ಯಾಯಪೀಠವು ತಾಜ್ಮಹಲ್ನ 500 ಮೀಟರ್ ವ್ಯಾಪ್ತಿಯನ್ನು ತಕ್ಷಣವೇ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಂದ ತೆರವುಗೊಳಿಸುವಂತೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ.