ತಿರುವನಂತಪುರ, ಸೆ 27 (DaijiworldNews/MS): ದೇವರನಾಡು ಕೇರಳವು ಭಯೋತ್ಪಾದನೆ ಮತ್ತು ತೀವ್ರವಾದಿ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಕೇರಳ ಪ್ರವಾಸದಲ್ಲಿರುವ ಅವರು ಇಲ್ಲಿನ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, "ಹಿಂಸಾಚಾರದಲ್ಲಿ ತೊಡಗಿರುವ ಜನರಿಗೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಸರ್ಕಾರವು ಮೌನ ಬೆಂಬಲವನ್ನು ನೀಡುತ್ತಿದೆ" ಎಂದು ಆರೋಪಿಸಿದ್ದಾರೆ.
ಹಿಂಸಾಚಾರ ಹೆಚ್ಚುತ್ತಿರುವ ಕಾರಣ ಕೇರಳದ ಸಾಮಾನ್ಯ ನಾಗರಿಕನು ಸುರಕ್ಷಿತವಾಗಿರುತ್ತಿಲ್ಲ. ಇದಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಾಯೋಜಿತ ಹಿಂಸಾಚಾರವೂ ಒಂದು ಕಾರಣ. ಎಲ್ಡಿಎಫ್ ಸರ್ಕಾರ ಮತ್ತು ಅದರ ನೀತಿಗಳಿಂದಾಗಿ ಕೇರಳದ ಜನರು ಅಪಾಯದಲ್ಲಿ ಸಿಲುಕುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯಗಳು ಸರಿದಂತೆ ವಿವಿಧ ಸರ್ಕಾರಿ ನೇಮಕಾತಿಗಳಲ್ಲಿ ಸರ್ಕಾರ ಸ್ವಜನಪಕ್ಷಪಾತ ಮಾಡುತ್ತಿದೆ. ಲೋಕಾಯುಕ್ತವನ್ನು ದುರ್ಬಲಗೊಳಿಸುವ ಮೂಲಕ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.