ಲಕ್ನೋ, ಸೆ 27 (DaijiworldNews/HR): ಉತ್ತರ ಪ್ರದೇಶದ ಔರೈಯ ಜಿಲ್ಲೆಯ ಶಾಲೆಯೊಂದರಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ತಪ್ಪು ತಪ್ಪಾಗಿ ಬರೆದಿದ್ದಾನೆ ಎಂದು ಶಿಕ್ಷಕರೊಬ್ಬರು ಕೋಪಗೊಂಡು ಹಿಗ್ಗಾ ಮುಗ್ಗಾ ಥಳಿಸಿ ಗಂಭೀರ ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ನಿಖಿತ್ ಕುಮಾರ್(10 ನೇ ತರಗತಿ) ಎಂದು ಗುರುತಿಸಲಾಗಿದ್ದು, ಶಾಲೆಯ ಶಿಕ್ಷಕನನ್ನು ಅಶ್ವಿನಿ ಸಿಂಗ್ ಎನ್ನಲಾಗಿದೆ.
ಇನ್ನು ನಿಖಿತ್ ಕುಮಾರ್ ಸಮಾಜ ವಿಜ್ಞಾನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಕಾಗುಣಿತ ದೋಷ ಮಾಡಿದ್ದಾನೆ ಎಂಬ ಕಾರಣಕ್ಕಾಗಿ ಶಿಕ್ಷಕ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ, ಇದರಿಂದ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಟಾವಾದ ಸೈಫೈನಲ್ಲಿರುವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.
ಬಾಲಕನ ಪೋಷಕರು ಹಾಗೂ ಸಾರ್ವಜನಿಕರು ಶಿಕ್ಷಕನನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಘಟನೆ ನಡೆದ ಬಳಿಕ ಶಿಕ್ಷಕ ನಾಪತ್ತೆಯಾಗಿದ್ದಾನೆ.