ನವದೆಹಲಿ, ಸೆ 27 (DaijiworldNews/MS): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ದೇಶದಾದ್ಯಂತ 8 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿದ್ದು, 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಎನ್ಐಎ ನಡೆಸುತ್ತಿರುವ ಎರಡನೇ ಸುತ್ತಿನ ಸರಣಿ ದಾಳಿ ಇದಾಗಿದ್ದು, ವಿವಾದಾತ್ಮಕ ಇಸ್ಲಾಮಿಸ್ಟ್ ಗುಂಪಿನಿಂದ ಭಯೋತ್ಪಾದಕ ನಿಧಿ ಮತ್ತು ಆಪಾದಿತ ದೇಶ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎನ್ಐಎ ದಾಳಿಗಳನ್ನು ನಡೆಸಲಾಗಿದೆ. ರಾಜ್ಯಗಳ ವಿವಿಧ ತನಿಖಾ ಸಂಸ್ಥೆಗಳ ಜೊತೆ ಸೇರಿ ಪಿಎಫ್ಐ ಮೇಲೆ ಮತ್ತೊಂದು ಸುತ್ತಿನ ದಾಳಿ ಮಾಡಿದೆ. ಸೆ.22 ನಡೆಸಿದ ದಾಳಿಯಲ್ಲಿ ಪಿಎಫ್ಐ ಅಧ್ಯಕ್ಷ ಓಎಂಎ ಸಲ್ಮಾನ್, ಪಿ ಕೋಯಾ, ಇ ಅಬೂಬಕರ್, ಇಳಮ್ರಾಮ್ ಮತ್ತು ಸಿಪಿ ಮೊಹಮ್ಮದ್ ಬಸೀರ್ ಸೇರಿದಂತೆ 106 ಸದಸ್ಯರನ್ನು ಬಂಧಿಸಲಾಗಿತ್ತು. ಭಯೋತ್ಪಾದಕ ಚಟುವಟಿಕೆಗಳು ಮತ್ತು ಧನಸಹಾಯಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು..
ಇನ್ನು ಈ ಬಾರಿ ಕರ್ನಾಟಕ, ಗುಜರಾತ್, ದೆಹಲಿ, ಅಸ್ಸಾಂ ಸೇರಿ 8 ರಾಜ್ಯಗಳಲ್ಲಿ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ. ಕರ್ನಾಟಕದ ಉಡುಪಿ, ಶಿವಮೊಗ್ಗ, ಕೋಲಾರ, ಚಿತ್ರದುರ್ಗ, ಚಾಮರಾಜನಗರ ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ಮಾಡಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿಯಲ್ಲಿ ಐವರು, ದಕ್ಷಿಣ ಕನ್ನಡದಲ್ಲಿ ೧೦ ಕ್ಕೂ ಹೆಚ್ಚು ಮಂದಿ , ಬಾಗಲಕೋಟೆಯಲ್ಲಿ 7 ಮಂದಿ, ವಿಜಯಪುರದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ, ಬೆಳಗಾವಿಯಲ್ಲಿ 5 ಜನ, ಚಿತ್ರದುರ್ಗದಲ್ಲಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ್ ಎಂಬ ಮಾಹಿತಿ ಲಭ್ಯವಾಗಿದೆ.