ಹುಬ್ಬಳ್ಳಿ, ಸೆ.26 (DaijiworldNews/SM): ಆತ್ಮನಿರ್ಭರ ಭಾರತಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಾವೆಲ್ಲ ಸಂಕಲ್ಪ ಮಾಡೋಣ, ಒಡಿಶಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಯನ್ನು ಗೌರವಿಸುವ ಮೂಲಕ ಹುಬ್ಬಳ್ಳಿ ಧಾರವಾಡದ ಜನತೆ ದೇಶದ ಸಮಸ್ತ ಮಹಿಳೆಯರನ್ನು ಗೌರವಿಸಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಹೇಳಿದ್ದಾರೆ.
ಇಂದು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಇಲ್ಲಿನ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಪೌರಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ಅವಳಿನಗರಗಳು ಕರ್ನಾಟಕ ಮಾತ್ರವಲ್ಲ, ಸಮಗ್ರ ಭಾರತದ ಸಾಂಸ್ಕೃತಿಕ, ಐತಿಹಾಸಿಕ ನಗರಗಳಾಗಿವೆ. ಉತ್ತರ ಕರ್ನಾಟಕದ ಈ ನಗರಗಳಲ್ಲಿ ಕನ್ನಡ, ಮರಾಠಿ ಭಾಷೆಗಳ ಅದ್ಭುತ ಸಂಗಮವಿದೆ. ಆಧ್ಯಾತ್ಮ, ಸಾಂಸ್ಕೃತಿಕ, ಶೈಕ್ಷಣಿಕ ಮಾತ್ರವಲ್ಲ, ಆಧುನಿಕವಾಗಿಯೂ ಈ ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಉತ್ತರ ಕರ್ನಾಟಕವು ಸಾಂಸ್ಕೃತಿಕ, ಅಧ್ಯಾತ್ಮಿಕತೆ ಹಾಗೂ ಶೈಕ್ಷಣಿಕ ಸಾಧನೆ ಹಾಗೂ ಆಧುನಿಕ ಸೌಲಭ್ಯಗಳಿಂದ ದೇಶದಲ್ಲಿ ಹೆಸರುವಾಸಿಯಾಗಿದೆ. ಪ್ರಾಚೀನ ಸಾಧನೆಯ ಜೊತೆಗೆ ಅಧುನಿಕತೆಯ ಅಭಿವೃದ್ದಿಗೆ ತೆರೆದುಕೊಂಡಿದೆ.
ಹುಬ್ಬಳ್ಳಿ-ಧಾರವಾಡ ಜನರ ಪ್ರೀತಿಯು ನನ್ನನ್ನು ಪುಳಕಿತಗೊಳಿಸಿದೆ. ಇದು ಭಾರತದ ರಾಷ್ಟ್ರಪತಿಗೆ ಸಂದ ಸನ್ಮಾನ ಮಾತ್ರವಲ್ಲ; ಇದು ಇಡೀ ದೇಶದ ಮಹಿಳೆಯರಿಗೆ ಸಂದ ಸನ್ಮಾನವಾಗಿದೆ ಎಂದು ರಾಷ್ಟ್ರಪತಿ ಮುರ್ಮು ಅವರು ಅಭಿಮಾನ ವ್ಯಕ್ತಪಡಿಸಿದರು. ಇಡೀ ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಉಲ್ಲೇಖನೀಯವಾಗಿದೆ. ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮವಾಗಿರುವ ಹುಬ್ಬಳ್ಳಿ-ಧಾರವಾಡ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುವ ಮೂಲಕ ವಿದ್ಯಾಕಾಶಿಯಾಗಿ ಹೊರಹೊಮ್ಮಿದೆ.