ಕೋಯಿಕ್ಕೋಡ್, ಸೆ 26 (DaijiworldNews/DB): ಮನೆಯ ಆರ್ಥಿಕ ಸಂಕಷ್ಟ ಮತ್ತು ಸಾಲಗಾರರ ಕಿರುಕುಳದ ಬಗ್ಗೆ ಮುಖ್ಯಮಂತ್ರಿಯವರಿಗೆ ದೂರು ನೀಡಲು ಬಾಲಕನೊಬ್ಬ ಮನೆಯವರಿಗೆ ತಿಳಿಸದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿಗೆ ತೆರಳಿದ ಪ್ರಸಂಗ ತಿರುವನಂತಪುರಂನಲ್ಲಿ ನಡೆದಿದೆ.
ಕೋಯಿಕ್ಕೋಡ್ನ ವೆಲೋಮ್ ಪಂಚಾಯತ್ನ ಕೊಯೂರಾ ವಾರ್ಡ್ನ ನಿವಾಸಿ ರಾಜೀವ್ ತರಕ್ಕಂಡಿ ಅವರ ಪುತ್ರ ದೇವಾನಂದನ್ (16) ಎಂಬಾತನೇ ಸಿಎಂ ಭೇಟಿಗೆ ತೆರಳಿದ ಬಾಲಕ. ದೇವಾನಂದನ್ ಪೋಷಕರು ಖಾಸಗಿ ಲೇವಾದೇವಿ ಸಂಸ್ಥೆಯಿಂದ ಬಡ್ಡಿಗೆ ಹಣ ಪಡೆದಿದ್ದು, ಸಾಲ ತೀರಿಸದ ಹಿನ್ನೆಲೆಯಲ್ಲಿ ಸಾಲ ನೀಡಿದ ಸಂಸ್ಥೆ ಕಿರುಕುಳ ನೀಡುತ್ತಿತ್ತು. ಇದರಿಂದ ಬೇಸರಗೊಂಡ ಬಾಲಕ ಮನೆಯಲ್ಲಿ ಹೇಳದೆ ಸಿಎಂಗೆ ದೂರು ನೀಡುವ ಸಲುವಾಗಿ ಸೀದಾ ಬಸ್ ಹತ್ತಿ ತಿರುವನಂತಪುರಂಗೆ ಹೋಗಿದ್ದಾನೆ.
ಶನಿವಾರ ಬೆಳಗ್ಗೆ ವಡಕರದಿಂದ ಎರನಾಡ್ ಎಕ್ಸ್ಪ್ರೆಸ್ ಹತ್ತಿ ರಾತ್ರಿ 9 ಗಂಟೆಗೆ ತಿರುವನಂತಪುರಂ ತಲುಪಿದ ಬಾಲಕ ತಂಪನೂರಿನಿಂದ ಆಟೋದಲ್ಲಿ ಕ್ಲಿಫ್ ಹೌಸ್ ಇರುವ ದೇವಸ್ವಂ ಬೋರ್ಡ್ ಜಂಕ್ಷನ್ ತಲುಪಿದ್ದಾನೆ. ಅಲ್ಲಿದ್ದ ಭದ್ರತಾ ಪೊಲೀಸರಲ್ಲಿ ತಾನು ಬಂದಿರುವ ಕಾರಣ ತಿಳಿಸಿ ಸಿಎಂ ಭೇಟಿಗೆ ಬಿಡುವಂತೆ ಕೋರಿದ್ದಾನೆ. ಬಳಿಕ ಪೊಲೀಸರು ಆತನನ್ನು ಮ್ಯೂಸಿಯಂ ಠಾಣೆಗೆ ಕರೆದೊಯಯ್ದು ಊಟ ನೀಡಿ ಬಳಿಕ ತಂದೆಗೆ ಕರೆ ಮಾಡಿ ಆತ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಇತ್ತ ಶಾಲೆಗೆ ಹೋದ ಮಗ ಮನೆಗೆ ಬಾರದಿರುವುದರಿಂದ ಆತಂಕಿತರಾದ ಪೋಷಕರು ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಪೊಲೀಸರ ಕರೆ ಸ್ವೀಕರಿಸಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಭಾನುವಾರ ಬೆಳಗ್ಗೆ ಮುಖ್ಯಮಂತ್ರಿಯವರಿಗೆ ವಿಷಯ ತಿಳಿಸಿದಾಗ ಬಾಲಕ ಮತ್ತು ಆತನ ತಂದೆಯನ್ನು ಬರಹೇಳುವಂತೆ ತಿಳಿಸಿದರು. ಸಿಎಂ ಬಳಿ ಹೋದ ಬಾಲಕನಿಗೆ ಮನೆಯಲ್ಲಿ ಹೇಳದೆ ಎಲ್ಲೂ ಹೋಗದಂತೆ ಸಲಹೆ ಮಾಡಿ ಆತನ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ ಇಬ್ಬರನ್ನೂ ಬೀಳ್ಕೊಟ್ಟರು. ಅಲ್ಲದೆ ದೂರಿನ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.