ನವದೆಹಲಿ, ಸೆ 26 (DaijiworldNews/DB): ವಿಶ್ವದ ಐಕಾನಿಕ್ ಪೇಂಟಿಂಗ್ಗಳಲ್ಲಿ ಮೊನಾಲಿಸಾ ಪೇಂಟಿಗ್ಗೆ ಅಗ್ರಸ್ಥಾನವಿದೆ. ಇದೇ ಮೊನಾಲಿಸಾಳನ್ನು ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿ ಪ್ರಕಾರವಾಗಿ ತೋರಿಸಿದರೆ ಹೇಗೆ ಕಾಣಬಹುದು? ಅಂತಹ ವಿನೂತನ ಪ್ರಯತ್ನವೊಂದಕ್ಕೆ ಮಹಿಳೆಯೊಬ್ಬರು ಕೈ ಹಾಕಿದ್ದಾರೆ.
ಹೌದು. 16 ನೇ ಶತಮಾನದಲ್ಲಿ ಪ್ರಸಿದ್ಧ ವರ್ಣಚಿತ್ರಕಾರ ಲಿಯೊನಾರ್ಡೊ ಡಾ ವಿನ್ಸಿ ಚಿತ್ರಿಸಿದ್ದ ಮೊನಾಲಿಸಾ ಚಿತ್ರ ಇಂದಿಗೂ ಬೇಡಿಕೆಯ ರಚನೆಯಾಗಿಯೇ ಉಳಿದುಕೊಂಡಿದೆ. ಸೌಂದರ್ಯದ ಗಣಿ ಮೊನಾಲಿಸಾ ಬಹುಶಃ ಎಲ್ಲರಿಗೂ ಅಚ್ಚುಮೆಚ್ಚು. ಹೀಗಿರುವಾಗ ಆಕೆಯನ್ನು ಭಾರತದ ವಿವಿಧ ರಾಜ್ಯಗಳ ಮಹಿಳೆಯರಂತೆ ಚಿತ್ರಿಸಿದರೆ ಹೇಗೆ ಕಾಣಬಹುದು ಎಂಬ ಕುತೂಹಲದಿಂದ ಪೂಜಾ ಸಾಂಗ್ವಾನ್ ಎಂಬವರು ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡರು. ತಾವು ಮಾಡಿದ ಎಲ್ಲಾ ಕಲಾಚಿತ್ರಗಳನ್ನು ಅವರು ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿಯ ಮಹಿಳೆಯರಂತೆ ಸೀರೆಯುಟ್ಟು, ತಲೆಮೇಲೆ ಕೂಲಿಂಗ್ ಗ್ಲಾಸ್ ಧರಿಸಿರುವ ಮೊನಾಲಿಸಾ ಚಿತ್ರವನ್ನು ರಚಿಸಿದ್ದಾರೆ. ಒಂದು ವೇಳೆ ಮೊನಾಲಿಸಾ ದಕ್ಷಿಣ ದೆಹಲಿಯಲ್ಲಿ ಜನಿಸಿದ್ದರೆ ಆಕೆಗೆ ಲಿಸಾ ಮೌಸಿ ಎಂಬ ಹೆಸರಿರುತ್ತಿತ್ತು ಎಂದು ಬರೆದುಕೊಂಡಿದ್ದಾರೆ. ಇನ್ನು ಮಹಾರಾಷ್ಟ್ರ ಮಹಿಳೆಯಂತೆ ಸೀರೆಯುಟ್ಟು ಸೂಡಿ ಹಾಕಿ ಮಲ್ಲಿಗೆ ಮುಡಿದಿರುವ ಮೊನಾಲಿಸಾಳನ್ನು ಚಿತ್ರಿಸಿದ್ದು, ಮಹಾರಾಷ್ಟ್ರದಲ್ಲಿ ಆಕೆ ಜನಿಸಿದ್ದರೆ ಲಿಸಾ ತಾಯ್ ಎನ್ನುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ಬಿಹಾರಿ ಮಹಿಳೆಯರಂತೆ ಸೀರೆಯ ಸೆರಗನ್ನು ತಲೆಗೆ ಹೊದ್ದುಕೊಂಡಿರುವ ಚಿತ್ರದಲ್ಲಿ ಆಕೆ ಬಿಹಾರದಲ್ಲಿ ಜನಿಸಿದ್ದರೆ ಲಿಸಾ ದೇವಿಯಾಗುತ್ತಿದ್ದಳು ಎಂದಿದ್ದಾರೆ.
ರಾಜಸ್ತಾನ ಮಹಿಳೆಯರಂತೆ ತಲೆಗೆ ಸೆರಗು ಹೊದ್ದು, ದೊಡ್ಡ ಮೂಗುತಿ ಧರಿಸಿರುವ ಚಿತ್ರದಲ್ಲಿ ರಾಜಸ್ತಾನದಲ್ಲಿ ಆಕೆ ಜನಿಸಿದ್ದರೆ ಮಹಾರಾಣಿ ಲಿಸಾ ಎಂದು ಜನ ಕರೆಯುತ್ತಿದ್ದರು ಎಂದು ಬರೆದಿದ್ದಾರೆ. ಕಲ್ಕತ್ತಾ ಮಹಿಳೆಯಂತೆ ಸೀರೆಯ ಸೆರಗನ್ನು ಬಲಬದಿಯ ಬುಜದಿಂದ ಹೊದ್ದುಕೊಂಡಿರುವ ಚಿತ್ರಕ್ಕೆ ಶೋನಾ ಲಿಸಾ ಎಂಬ ಹೆಸರಿನಲ್ಲಿ ಆಕೆ ಖ್ಯಾತಿಯಾಗುತ್ತಿದ್ದಳು ಎಂದಿದ್ದಾರೆ. ಕೇರಳದ ಪ್ರಖ್ಯಾತ ಸೀರೆಯಲ್ಲಿ ಆಕೆಯನ್ನು ಚಿತ್ರಿಸಿ ಲಿಸಾ ಮೋಳ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದಳು ಎಂದೂ, ತೆಲಂಗಾಣದ ಮಹಿಳೆಯರಂತೆ ಚಿತ್ರಿಸಿ ಲಿಸಾ ಬೊಮ್ಮಾ ಎಂದು ಹೆಸರಿಟ್ಟಿದ್ದಾರೆ. ಗುಜರಾತ್ ಸೀರೆಯಲ್ಲಿ ಲಿಸಾ ಬೆನ್, ತಮಿಳುನಾಡಿನ ಸಾಂಪ್ರದಾಯಿಕ ಸೀರೆ ಶೈಲಿಯಲ್ಲಿ ಚಿತ್ರಿಸಿ ಲಿಸಾ ಮಾಮಿ ಹೆಸರನ್ನಿಟ್ಟಿದ್ದಾರೆ.
ಇನ್ನು ಪೂಜಾ ಅವರ ಈ ವಿನೂತನ ಪ್ರಯತ್ನ ಮತ್ತು ಪ್ರತಿಭೆಗೆ ಜನ ಹುರಿದುಂಬಿಸಿದ್ದು, ಅದ್ಬುತ ಕಲ್ಪನೆ ಎಂದು ಕೊಂಡಾಡಿದ್ದಾರೆ.