ಪಾಲಕ್ಕಾಡ್ , ಸೆ 26 (DaijiworldNews/MS): ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುತ್ತಿರುವುದಕ್ಕೆ ಗಾಂಧಿ ಕುಟುಂಬದಲ್ಲಿ ಯಾರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸೋಮವಾರ ಹೇಳಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿಯಲ್ಲಿ ಭಾರತ್ ಜೋಡೋ ಯಾತ್ರೆಯ ಬೆಳಗಿನ ಅವಧಿ ಮುಗಿದ ಕೂಡಲೇ ತಿರುವನಂತಪುರಂ ಸಂಸದರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
“ನಾನು ಬಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದೇನೆ. ನಾನು ಗಾಂಧಿ ಕುಟುಂಬದ ಮೂವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರಿಗೆ ಸ್ಪರ್ಧಿಸಲು ಯಾವುದೇ ಸಮಸ್ಯೆ ಇಲ್ಲ. ನಾನು ಇನ್ನೂ ಸ್ಪರ್ಧೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ದೇಶಾದ್ಯಂತ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದೇನೆ " ಎಂದು ಅವರು ಹೇಳಿದ್ದಾರೆ.
ಕೇರಳ ನಾಯಕರ ಬೆಂಬಲ ಬಯಸುತ್ತಿದ್ದೀರಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿರುವ ತರೂರ್, 'ಖಂಡತವಾಗಿಯೂ ಹೌದು. ಆದರೆ, ಎಲ್ಲರೂ ಬೆಂಬಲಿಸುವುದಿಲ್ಲ. ನಾಮಪತ್ರ ಸಲ್ಲಿಕೆ ಬಳಿಕ ನನಗೆ ಬೆಂಬಲ ಹೆಚ್ಚಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಶುಕ್ರವಾರ ತರೂರ್ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅ. 19ರಂದು ಫಲಿತಾಂಶ ಹೊರಬೀಳಲಿದೆ.