ಮೈಸೂರು, ಸೆ 26 (DaijiworldNews/MS): ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆ ಧರಿಸಿ ದಸರಾ ಮಹೋತ್ಸವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸುವ ಮೂಲಕ ಮೈಸೂರಿಗೆ ವಿಶೇಷ ಗೌರವ ನೀಡಿದ್ದಾರೆ.
ರಾಷ್ಟ್ರಪತಿಯವರಿಗೆ ದಸರಾ ಮಹೋತ್ಸವ ಉದ್ಘಾಟನೆಗೆ ಜಿಲ್ಲಾಡಳಿತದ ಪರವಾಗಿ ಅಧಿಕೃತವಾಗಿ ಆಹ್ವಾನಿಸುವಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗೌರವ ಸೂಚಕವಾಗಿ ಶ್ವೇತ ವರ್ಣದ ಮೈಸೂರು ರೇಷ್ಮೆ ಸೀರೆ, ಫಲ ತಾಂಬೂಲ ನೀಡಿ ಗೌರವಿಸಿದ್ದರು.
ಶ್ವೇತ ವರ್ಣ ಸೀರೆಯೆಂದರೆ ರಾಷ್ಟ್ರಪತಿಯವರಿಗೆ ಅಚ್ಚುಮೆಚ್ಚು ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಸ್ವಾಮ್ಯದ ಕೆ.ಎಸ್.ಐ.ಸಿ.ಯ ಸರ್ಕಾರಿ ರೇಷ್ಮೆ ಕಾರ್ಖಾನೆಗೆ ರಾಷ್ಟ್ರಪತಿಯವರಿಗಾಗಿ ವಿಶೇಷವಾಗಿ ನೇಯ್ದ ಮೈಸೂರು ರೇಷ್ಮೆ ಸೀರೆ ತಯಾರಿಕೆಗೆ ಆದೇಶ ನೀಡಿದ್ದರು.
ಜಿಲ್ಲಾಡಳಿತದಿಂದ ನೀಡಲಾದ ಮೈಸೂರು ರೇಷ್ಮೆ ಸೀರೆಯನ್ನೇ ರಾಷ್ಟ್ರಪತಿ ಉಟ್ಟುಕೊಂಡು ದಸರಾ ಉದ್ಘಾಟಿಸಿ ಮೈಸೂರಿಗರಿಗೆ ಸಂತಸ ತಂದಿದೆ.