ಮಧ್ಯಪ್ರದೇಶ, ಸೆ 26 (DaijiworldNews/DB): ಸ್ವಚ್ಛತೆ ಕುರಿತು ವಿದ್ಯಾರ್ಥಿನಿಗೆ ಅರಿವು ಮೂಡಿಸಿದ ಪೋಸ್ ನೀಡಲು ಹೋಗಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಅರೆಬೆತ್ತಲೆ ಸ್ಥಿತಿಯಲ್ಲಿ ನಿಲ್ಲಿಸಿದ ಶಿಕ್ಷಕನೊಬ್ಬ ಅಮಾನತು ಶಿಕ್ಷೆಗೆ ಗುರಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಶ್ರವಣ್ಕುಮಾರ್ ತ್ರಿಪಾಠಿ ಎಂಬಾತನೇ ಅಮಾನತುಗೊಂಡ ಶಿಕ್ಷಕ. 10 ವರ್ಷದ ಬುಡಕಟ್ಟು ವಿದ್ಯಾರ್ಥಿನಿಯೊಬ್ಬಳು ಕೊಳಕು ಬಟ್ಟೆ ಧರಿಸಿ ಶಾಲೆಗೆ ಆಗಮಿಸಿದ್ದಳು. ಇದನ್ನು ನೋಡಿದ ಶಿಕ್ಷಕ ಶ್ರವಣ್ಕುಮಾರ್ ಕೊಳಕು ಸಮವಸ್ತ್ರ ತೆಗೆದು ನೀಡುವಂತೆ ಆಕೆಗೆ ಹೇಳಿದ್ದಾಳೆ. ಶಿಕ್ಷಕನ ಮಾತು ಕೇಳಿ ಆಕೆ ಬಟ್ಟೆ ತೆಗೆದು ನೀಡಿದ್ದಾಳೆ. ಅಲ್ಲದೆ ಅರೆಬೆತ್ತಲೆಯಾಗಿ ನಿಂತುಕೊಂಡಿದ್ದಾಳೆ. ಇತ್ತ ತಾನೊಬ್ಬ ಸ್ವಚ್ಛತಾ ಸ್ವಯಂ ಸೇವಕ ಎಂದು ಪೋಸ್ ಕೊಡಲು ಶಿಕ್ಷಕ ವಿದ್ಯಾರ್ಥಿನಿಯ ಬಟ್ಟೆ ತೊಳೆದು ಅದನ್ನು ಫೋಟೋ ತೆಗೆಸಿಕೊಂಡಿದ್ದಾನೆ. ತಾನು ಬಟ್ಟೆ ತೊಳೆಯುತ್ತಿರುವ ಮತ್ತು ವಿದ್ಯಾರ್ಥಿನಿ ಅರೆಬೆತ್ತಲೆಯಾಗಿ ನಿಂತುಕೊಂಡಿರುವ ಫೋಟೋಗಳನ್ನು ಶಿಕ್ಷಣ ಇಲಾಖೆಯ ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಿದ್ದಾನೆ. ಬಳಿಕ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಫೋಟೋ ನೋಡಿದ ಗ್ರಾಮಸ್ಥರು ಶಿಕ್ಷಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಿಕ್ಷಕನ ಕ್ರಮದ ವಿರುದ್ದ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಆತನನ್ನು ಅಮಾನತು ಮಾಡಲಾಗಿದೆ ಎಂದು ಬುಡಕಟ್ಟು ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ಆನಂದ್ ರೈ ಸಿನ್ಹಾ ತಿಳಿಸಿರುವುದಾಗಿ ವರದಿಯಾಗಿದೆ.