ಜೈಪುರ, ಸೆ 26 (DaijiworldNews/DB): ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಾಗಿ ಸಿಎಂ ಅಶೋಕ್ ಗೆಹ್ಲೋಟ್ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರಾಜಸ್ಥಾನ ಸರ್ಕಾರದ 90 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದು, ರಾಜಸ್ತಾನದಲ್ಲೀಗ ರಾಜಕೀಯ ಬಿಕ್ಕಟ್ಟು ಎದುರಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಸ್ಪರ್ಧಿಸುವುದಾಗಿ ಸಿಎಂ ಅಶೋಕ್ ಗೆಹ್ಲೋಟ್ ಈಗಾಗಲೇ ಘೋಷಿಸಿದ್ದಾರೆ. ಅಲ್ಲದೆ ಹೊಸ ತಲೆಮಾರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆಯೂ ವ್ಯಕ್ತವಾಗಿತ್ತು. ಈ ನಡುವೆ ಸಚಿನ್ ಪೈಲಟ್ ಅವರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪೈಲಟ್ಗೆ ಸಿಎಂ ಸ್ಥಾನ ನೀಡುವುದು ಹಲವರಿಗೆ ಇಷ್ಟವಿಲ್ಲ. ಸಿಎಂ ಬದಲಾವಣೆ ವಿಚಾರವು ಪಕ್ಷದೊಳಗೆ ಭಾರೀ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ 90 ಮಂದಿ ಶಾಸಕರು ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ ಅನುಭವಿಯೊಬ್ಬರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ರಾಜೀನಾಮೆ ಸಲ್ಲಿಸಿದ ಶಾಸಕರ ಒತ್ತಾಯವಾಗಿದ್ದು, ಅದು ಸಾಧ್ಯವಾಗದಿದ್ದಲ್ಲಿ ಕಾಂಗ್ರೆಸ್ ತೊರೆಯುವ ನಿರ್ಧಾರದ ಕುರಿತು ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆಂದೂ ತಿಳಿದು ಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್ ಅವರು ಬಂಡಾಯವೆದ್ದ ಶಾಸಕರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ನಾಯಕರ ಭೇಟಿಗೆ ಶಾಸಕರು ನಿರಾಕರಿಸಿದ್ದರಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಇದರೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಾದ ಬಳಿಕವೇ ಸಿಎಂ ಸ್ಥಾನದ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂಬುದೂ ಶಾಸಕರ ಒತ್ತಾಯ ಎನ್ನಲಾಗಿದೆ.