ಶಿವಮೊಗ್ಗ, ಸೆ.26 (DaijiworldNews/HR): ಶಂಕಿತ ಉಗ್ರರ ಬಂಧನದಿಂದಾಗಿ ಜಿಲ್ಲೆಯ ಪೊಲೀಸರು ಭವಿಷ್ಯದಲ್ಲಿ ನಡೆಯಬಹುದಾದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಂಕಿತ ಉಗ್ರರು ಕರ್ನಾಟಕ ಮತ್ತು ಕೇರಳದ ಕರಾವಳಿ ಜಿಲ್ಲೆಗಳಲ್ಲಿ ಸಂಪರ್ಕ ಹೊಂದಿದ್ದಾರೆ. ಹಾಗಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಫೋನ್ ಕೂಡ ಬಳಕೆಯಾಗುತ್ತಿತ್ತು. ಪೊಲೀಸರು ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.
ಪಿಎಫ್ಐ ಮತ್ತು ಎಸ್ಡಿಪಿಐ ಕಚೇರಿಗಳ ಮೇಲೆ ಎನ್ಐಎ ದಾಳಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪೊಲೀಸರು 15 ಜನರನ್ನು ಬಂಧಿಸಿದ್ದಾರೆ. ಎನ್ಐಎ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ಹಿಂದೆ ಯುಎಪಿಎ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದಾಗ ಕೆಲವರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಈಗ ಏನಾಗಿದೆ? ಕೂಲಂಕಷ ತನಿಖೆ ಪ್ರಗತಿಯಲ್ಲಿದೆ. ನಮ್ಮ ಸರ್ಕಾರ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದ್ದಾರೆ.