ನೋಯ್ಡಾ( ಉತ್ತರಪ್ರದೇಶ), ಸೆ 26 (DaijiworldNews/DB): ತೊರೆದು ಹೋದ ಪತಿಗಾಗಿ ಮರುಗದೆ ಇಲ್ಲೊಬ್ಬ ಮಹಿಳೆ ಕಂದಮ್ಮನನ್ನು ಮಡಿಲಲ್ಲಿಟ್ಟುಕೊಂಡೇ ಇ-ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಆ ಮೂಲಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾ ಮೂಲದ ಚಂಚಲ್ ಶರ್ಮಾ ಅವರೇ ರಿಕ್ಷಾ ಓಡಿಸಿ ಬದುಕು ಕಟ್ಟಿಕೊಂಡವರು. ತಮ್ಮ ಒಂದು ವರ್ಷದ ಮಗುವನ್ನು ಮಡಿಲಲ್ಲಿಟ್ಟುಕೊಂಡು ದಿನವಿಡೀ ರಿಕ್ಷಾ ಓಡಿಸುವ ಚಂಚಲ್ ದಿನಕ್ಕೆ ಕನಿಷ್ಠ 300-400 ರೂ. ಗಳಿಸುತ್ತಾರೆ. ತಾನು ದುಡಿದು ಬಂದ ಹಣದಿಂದ ದೈನಂದಿನ ಜೀವನ ಸಾಗಿಸುತ್ತಾರೆ.
2019 ರಲ್ಲಿ ದಾದ್ರಿಯ ಛಯಾನ್ಸಾ ಗ್ರಾಮದ ವ್ಯಕ್ತಿಯೊಂದಿಗೆ ಚಂಚಲ್ ಶರ್ಮಾ ವಿವಾಹವಾದರು. ಆದರೆ ಪತಿಯಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಪತಿ-ಪತ್ನಿ ಇಬ್ಬರೂ ದೂರವಾದರು. ಬಳಿಕ ಮಗು ಜನಿಸಿತು. ಆದರೆ ಯಾರ ಹಂಗೂ ಇಲ್ಲದೆ, ಪತಿಗಾಗಿ ಮರುಗದೆ, ರಿಕ್ಷಾ ಓಡಿಸಿ ಜೀವನ ಸಾಗಿಸಲು ಮುಂದಾದರು. ಅದಕ್ಕಾಗಿ ಇ-ರಿಕ್ಷಾವೊಂದನ್ನು ಖರೀದಿಸಿದರು.
ಆರಂಭದಲ್ಲಿ ಇತರ ರಿಕ್ಷಾ ಚಾಲಕರು ಚಂಚಲ್ರನ್ನು ವಿರೋಧಿಸಿದ್ದರೂ, ಬಳಿಕ ಟ್ರಾಫಿಕ್ ಪೊಲೀಸರು ಮತ್ತು ಎಐಬಿ ಔಟ್ಪೋಸ್ಟ್ ಸಿಬಂದಿಯ ಬೆಂಬಲದೊಂದಿಗೆ ರಿಕ್ಷಾ ಓಡಿಸಿ ದುಡಿಮೆಯನ್ನು ಖಾಯಂ ಆಗಸಿಕೊಂಡರು.