ತಿರುಪತಿ, ಸೆ 26 (DaijiworldNews/MS): ತಿರುಪತಿ ಬಳಿಯ ರೇಣಿಗುಂಟಾದಲ್ಲಿರುವ ಖಾಸಗಿ ಆಸ್ಪತ್ರೆ ಮತ್ತು ನಿವಾಸದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ವೈದ್ಯ ಮತ್ತವರ ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಅಗ್ನಿ ದುರಂತದಲ್ಲಿ 45 ವರ್ಷದ ವೈದ್ಯ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.ಮೃತರನ್ನು ಡಾ ರವಿಶಂಕರ್ ರೆಡ್ಡಿ (45), ಪುತ್ರಿ ಕಾರ್ತಿಕಾ (8) ಮತ್ತು ಮಗ ಭರತ್ (12) ಎಂದು ಗುರುತಿಸಲಾಗಿದೆ.
ಮೃತ ವೈದ್ಯರ ಪತ್ನಿ ಡಾ.ಅನಂತಲಕ್ಷ್ಮಿ ಹಾಗೂ ತಾಯಿ ರಾಮಾ ಸುಬ್ಬಮ್ಮ ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೇಣಿಗುಂಟ ಪೊಲೀಸರ ಪ್ರಕಾರ, ಕಡಪಾ ಜಿಲ್ಲೆಯವರಾದ ಡಾ ರವಿಶಂಕರ್ ರೆಡ್ಡಿ ಅವರು ಇತ್ತೀಚೆಗೆ ರೇಣಿಗುಂಟಕ್ಕೆ ಸ್ಥಳಾಂತರಗೊಂಡಿದ್ದರು ಹಾಗೂ ವಸುಂಧರಾ ನಗರದಲ್ಲಿ ತಮ್ಮದೇ ಸ್ವಂತ ಆಸ್ಪತ್ರೆಯನ್ನು ಸ್ಥಾಪಿಸಿದ್ದರು.
ಆಸ್ಪತ್ರೆಯನ್ನು ನೆಲಮಹಡಿಯಲ್ಲಿ ನಡೆಸುತ್ತಿದ್ದು, ವೈದ್ಯರು ಮತ್ತು ಅವರ ಇತರ ಕುಟುಂಬ ಸದಸ್ಯರು ಹೊಸದಾಗಿ ನಿರ್ಮಿಸಲಾದ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯ ಎರಡನೇ ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.