ಫತೇಹಾಬಾದ್, ಸೆ 25 (DaijiworldNews/DB): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾವಣೆಗೆ ಪ್ರತಿಯೊಬ್ಬರೂ ಈಗಿಂದಲೇ ಶ್ರಮಿಸಬೇಕು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಲೋಕದಳ ಭಾನುವಾರ ಆಯೋಜಿಸಿದ್ದ ವಿಪಕ್ಷಗಳ ಮುಖಂಡರ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಅವರು, 2024ರಲ್ಲಿ ಸರ್ಕಾರ ಬದಲಾಗುವುದನ್ನು ನಾವೆಲ್ಲರೂ ನೋಡಬೇಕು. ಅದಕ್ಕಾಗಿ ಈಗ ಸಮಯ ಬಂದಿದೆ. ಈಗಿಂದಲೇ ಕೆಲಸ ಶುರು ಮಾಡಿದರೆ ಸರ್ಕಾರ ಬದಲಾವಣೆಯನ್ನು ಕಣ್ತುಂಬಿಸಿಕೊಳ್ಳಲು ಸಾಧ್ಯ ಎಂದರು.
ಯುವಕರು, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ಸರ್ಕಾರವನ್ನು ಬದಲಾಯಿಸಿ, ರೈತಪರ, ಜನಪರ ಸರ್ಕಾರವನ್ನು ಕೇಂದ್ರದಲ್ಲಿ ಆಡಳಿತ ನಡೆಸುವಂತೆ ಮಾಡುವುದೇ ನಿಜವಾದ ಪರಿಹಾರ ಎಂದು ತಿಳಿಸಿದರು.
ದೆಹಲಿಯ ಗಡಿಯಲ್ಲಿ ಹಲವಾರ ಬಾರಿ ರೈತರು ಪ್ರತಿಭಟನೆ ನಡೆಸಿದರೂ ಕಂಡೂ ಕಾಣದಂತೆ ಕೇಂದ್ರ ಸರ್ಕಾರ ಸುಮ್ಮನಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವುದಾಗಲೀ, ಸಮಸ್ಯೆಗಳನ್ನು ನಿವಾರಿಸುವುದಾಗಲೀ ಮಾಡುತ್ತಿಲ್ಲ. ಬದಲಾವಣೆ ತರುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದು ಅಗತ್ಯವಾಗಿದೆ ಎಂದರು.
ರೈತ ಮುಖಂಡರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ನೀಡಿರುವ ಭರವಸೆ ಇಲ್ಲಿವರೆಗೆ ಭರವಸೆಯಾಗಿಯೇ ಉಳಿದಿದೆ ಎಂದವರು ಇದೇ ವೇಳೆ ತಿಳಿಸಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಮತ್ತು ಎಲ್ಲಾ ಎಡಪಕ್ಷಗಳು, ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಎದುರಿಸಬೇಕು. ಈ ವಿಪಕ್ಷಗಳ ಕೂಟವು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಾರಣವಾಗಬೇಕು. ತನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಆದರೆ ತಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಸ್ಪಷ್ಟಪಡಿಸಿದರು.