ಅರುಣಾಚಲ ಪ್ರದೇಶ, ಸೆ 25 (DaijiworldNews/DB): ಭಾರೀ ಮಳೆಯಿಂದಾಗಿ ಅರುಣಾಚಲ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದ್ದು, ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜನಜೀವನ ಅಸ್ತವ್ಯಸ್ಥಗೊಂಡಿದೆ.
ಪಶ್ಚಿಮ ಕಮೆಂಗ್ ಜಿಲ್ಲೆಯ ತಿಪ್ಪಿ ಜಲಪಾತ ಪ್ರದೇಶದಲ್ಲಿ ಹಲವಾರು ವಾಹನಗಳಿಗೆ ಹಾನಿಯಾಗಿದ್ದು, ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನಿಲುಗಡೆ ಮಾಡಲಾದ ಕೆಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ತಿಳಿದು ಬಂದಿದೆ.
ತಿಪ್ಪಿ ಜಲಪಾತದಲ್ಲಿ ನೀರಿನ ಭೋರ್ಗರೆತ ಹೆಚ್ಚಾಗಿದ್ದು, ಇದರ ಸುತ್ತಮುತ್ತಲೂ ಸೇರಿದಂತೆ ವಿವಿಧೆಡೆ ಭೂಕುಸಿತ ಸಂಭವಿಸಿದೆ. ಇನ್ನೂ ಮಳೆ ಮುಂದುವರಿಯುತ್ತಲೇ ಇದ್ದು, ಭೂಕುಸಿತದ ಆತಂಕ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಜನರು ಸಂಚಾರಕ್ಕೆ ಪರ್ಯಾಯ ರಸ್ತೆ ಬಳಸುವಂತೆ ಇಲ್ಲಿನ ಆಡಳಿತ ಸೂಚಿಸಿದೆ.