ಉತ್ತರಾಖಂಡ್, ಸೆ 25 (DaijiworldNews/DB): ನನ್ನ ಮಗ ಅವನಾಯಿತು, ಕೆಲಸವಾಯಿತು ಎಂಬಂತೆ ಇರುವವನು. ಅವರು ತಪ್ಪು ಮಾಡುವವನಲ್ಲ ಎಂದು ರಿಸೆಪ್ಶನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಆರೋಪಿ ಪುಲ್ಕಿತ್ ಆರ್ಯನ ತಂದೆ, ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟ ವಿನೋದ್ ಆರ್ಯ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಕೊಲೆ ಆರೋಪದ ಮೇಲೆ ನನ್ನ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಅವರು ನ್ಯಾಯಯುತ ತನಿಖೆ ನಡೆಸುತ್ತಾರೆಂಬ ಭರವಸೆ ಇದೆ. ನನ್ನ ಮಗ ತುಂಬಾ ಮುಗ್ದ. ಅವನು ಯಾವ ತಪ್ಪೂ ಮಾಡುವವನಲ್ಲ. ಅಂಕಿತಾಳೂ ಒಳ್ಳೆ ಹುಡುಗಿ. ಆಕೆಯ ಪೋಷಕರಿಗೂ ನ್ಯಾಯ ಸಿಗಲಿ ಎಂದರು.
ಪೌರಿ ಗಡವಾಲ್ ಜಿಲ್ಲೆಯ ಭೋಗ್ ಪುರದ ರೆಸಾರ್ಟ್ಗೆ ಭೇಟಿ ನೀಡಿದ್ದ ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ರೆಸಾರ್ಟ್ ರಿಸೆಪ್ಶನಿಸ್ಟ್ ಅಂಕಿತಾ ಭಂಡಾರಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳಾದ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್, ಉದ್ಯೋಗಿ ಅಂಕಿತ್ ಗುಪ್ತಾ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ತನಿಖೆ ವೇಳೆ ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ತಪ್ಪೊಪ್ಪಿಕೊಂಡಿದ್ದ. ಮಗನನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ ತಂದೆ ವಿನೋದ್ ಆರ್ಯ ಹಾಗೂ ಸಹೋದರನನ್ನು ಬಿಜೆಪಿ ವಜಾಗೊಳಿಸಿತ್ತು.
2016 ರಲ್ಲಿ ಪುಲ್ಕಿತ್ ವಿರುದ್ಧ ಹರಿದ್ವಾರದಲ್ಲಿಐಪಿಸಿಯ ಸೆಕ್ಷನ್ 420 ಮತ್ತು 468 ರ ಅಡಿಯಲ್ಲಿ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಾಗಿತ್ತು.