ಲಕ್ನೋ, ಸೆ 25 (DaijiworldNews/DB): ಸದೃಢ ಆರೋಗ್ಯ, ಆಥ್ಲೆಟಿಕ್ ಅಡಿಪಾಯವನ್ನು ಗಮನದಲ್ಲಿಟ್ಟುಕೊಂಡು ಶಾಲಾ ಮಕ್ಕಳಿಗೆ ಉತ್ತರ ಪ್ರದೇಶ ಸರ್ಕಾರವು ಯೋಗವನ್ನು ಕಡ್ಡಾಯಗೊಳಿಸಿದೆ.
ಶಾಲಾ ಮಕ್ಕಳಿಗೆ ಯೋಗ ಕಡ್ಡಾಯ ಮಾಡಲಾಗಿದೆ. ಶೀಘ್ರ ಇದು ಕಾರ್ಯರೂಪಕ್ಕೆ ಬರಲಿದೆ. ಕ್ರೀಡಾಪಟುಗಳನ್ನು ಅಭಿವೃದ್ದಿಪಡಿಸುವುದಕ್ಕೂ ಯೋಗ ಪೂರಕವಾಗಲಿದೆ ಎಂದು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವನೀತ್ ಸೆಹಗಲ್ ಹೇಳಿರುವುದಾಗಿ ವರದಿಯಾಗಿದೆ.
5ರಿಂದ 14 ವರ್ಷದೊಳಗಿನ ಮಕ್ಕಳಿಗೆ ಯೋಗ ಕಲಿಕೆ ಮುಖಾಂತರ ಅವರ ದೈಹಿಕ ಸಾಮರ್ಥ್ಯ ವೃದ್ದಿ ಮತ್ತು ಕ್ರೀಡಾಪಟುಗಳಾಗಿ ಬೆಳೆಯಲು ಅಗತ್ಯ ತರಬೇತಿಯನ್ನೂ ನೀಡಲಾಗುವುದು. ಲಕ್ನೋದಲ್ಲಿ ಮಾಸ್ಟರ್ ಗೋಬಿಂದ್ ಸಿಂಗ್ ಕ್ರೀಡಾ ಶಾಲೆ ಅಭಿವೃದ್ದಿಪಡಿಸುವ ಯೋಜನೆ ಇಲಾಖೆ ಮುಂದಿದೆ. ಇಲ್ಲಿ ಕ್ರೀಡೆ, ಕ್ರೀಡಾ ನ್ಯೂಸ್ ಡ್ರಾಫ್ಟಿಂಗ್, ಕ್ರೀಡಾ ಮಾಹಿತಿ ಸ್ಕ್ರೀನಿಂಗ್ ಮತ್ತಿತರ ಕೋರ್ಸ್ಗಳನ್ನು ನೀಡಲಾಗುವುದು. ಇದಲ್ಲದೆ ಕ್ರೀಡಾ ಸಂಸ್ಥೆಗಳು ಮತ್ತು ಆಟಗಾರರಿಗೆ ಜಾಗತಿಕವಾಗಿ ತರಬೇತಿ ಕೇಂದ್ರ ಸ್ಥಾಪನೆಗೆ ಬಾಡಿಗೆಗೆ ಜಾಗ ನೀಡುವ ಉದ್ದೇಶವೂ ಇದೆ ಎಂದವರು ತಿಳಿಸಿದ್ದಾರೆ.