ಪಣಜಿ, ಸೆ 25 (DaijiworldNews/DB): ಒಂದೆಡೆ ಪತ್ನಿಯ ಅಸ್ವಸ್ಥತೆ, ಇನ್ನೊಂದೆಡೆ ತಾನು ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ. ಈ ನಡುವೆ ವಿಕಲಚೇತನ ಪುತ್ರಿಗೆ ಆಹಾರ ನೀಡಲು ದಾರಿ ಕಾಣದೆ ವ್ಯಕ್ತಿಯೊಬ್ಬರು ರೋಬೋಟ್ ಅಭಿವೃದ್ದಿಪಡಿಸಿದ್ದಾರೆ. ವೃತ್ತಿಯಲ್ಲಿ ದಿನಗೂಲಿ ನೌಕರನಾಗಿರುವ ವ್ಯಕ್ತಿಯ ಆವಿಷ್ಕಾರಕ್ಕೆ ಇದೀಗ ಮೆಚ್ಚುಗೆಯೂ ಹರಿದು ಬಂದಿದೆ.
ದಕ್ಷಿಣ ಗೋವಾದ ಪೊಂಡಾ ತಾಲ್ಲೂಕಿನ ಬೆತೋರಾ ಗ್ರಾಮದ ಬಿಪಿನ್ ಕದಮ್ ಅವರೇ ರೋಬೋಟ್ ಅಭಿವೃದ್ದಿಪಡಿಸಿದವರು. ದಿನಗೂಲಿ ನೌಕರರಾಗಿರುವ ಬಿಪಿನ್ ಅವರಿಗೆ ತಂತ್ರಜ್ಞಾನದ ಬಗ್ಗೆ ಜ್ಞಾನ ಇಲ್ಲದಿದ್ದರೂ, ಪರಿಸ್ಥಿತಿಯು ಅವರಿಗೆ ರೋಬೋಟ್ ಅಭಿವೃದ್ದಿಪಡಿಸುವ ಸಾಮರ್ಥ್ಯ ನೀಡಿದೆ. 'ಮಾ ರೋಬಾಟ್' ಎಂಬುದಾಗಿ ರೋಬೋಟ್ಗೆ ನಾಮಕರಣ ಮಾಡಲಾಗಿದೆ.
ಬಿಪಿನ್ ಅವರ 14 ಪುತ್ರಿಯ ಕೈಗಳು ಸ್ವಾಧೀನ ಕಳೆದುಕೊಂಡಿರುವುದರಿಂದ ಊಟ ಮಾಡಸಲು ಅಮ್ಮನನ್ನೇ ಅವಲಂಬಿಸಿದ್ದಳು. ಆದರೆ ಕಳೆದೆರಡು ವರ್ಷದಿಂದ ಅಮ್ಮ ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಹಿಡಿದಿದ್ದರಿಂದ ಮಗಳಿಗೆ ಊಟ ಮಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಬಿಪಿನ್ ಕೆಲಸಕ್ಕೆ ಹೋಗುವ ಮುಂಚೆ ಮತ್ತು ಕೆಲಸ ಮುಗಿಸಿ ಬಂದ ಬಳಿಕವಷ್ಟೇ ಆಕೆಗೆ ಊಟ ಮಾಡಿಸಬೇಕಾದ ಸ್ಥಿತಿ ಅವರದ್ದಾಗಿತ್ತು. ಹೀಗಾಗಿ ಮಗಳಿಗೆ ಊಟ ನೀಡುವುದಕ್ಕಾಗಿಯೇ ರೋಬೋಟ್ವೊಂದನ್ನು ಖರೀದಿಸುವ ಯೋಚನೆ ಹೊಳೆಯಿತು. ಆದರೆ ಎಷ್ಟೇ ಹುಡುಕಿದರೂ ಅವರಿಗೆ ಊಟ ಮಾಡಿಸುವ ರೋಬೋಟ್ ಸಿಕ್ಕಿರಲಿಲ್ಲ. ಹೀಗಾಗಿ ತಾವೇ ಸ್ವತಃ ರೋಬೋಟ್ ವಿನ್ಯಾಸಕ್ಕಾಗಿ ಇಳಿದರು. ರೋಬೋಟ್ ತಯಾರಿಸುವ ಬಗ್ಗೆ ಸುದೀರ್ಘವಾಗಿ ಅಧ್ಯಯನ ನಡೆಸಿ ದಿನದ 12 ಗಂಟೆ ಇದಕ್ಕಾಗಿ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಅನ್ವೇಷಷಣೆ ಬಳಿಕ ರೋಬೋಟ್ ಸಿದ್ದಪಡಿಸಲು ಮುಂದಾದರು. ಕೊನೆಗೂ ಮಗಳಿಗೆ ಊಟ ಮಾಡಿಸುವ ರೋಬೋಟ್ನ್ನು ಅಭಿವೃದ್ದಿಪಡಿಸಿಯೇ ಬಿಟ್ಟರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕಾರ್ಯವೈಖರಿ ಹೇಗಿದೆ?
ಮಗಳಿಗೆ ಏನು ಆಹಾರ ಬೇಕೋ ಅದನ್ನು ತಟ್ಟೆಯಲ್ಲಿಟ್ಟು ಆಕೆಯ ಬಾಯಿಗಿಡುವ ಕೆಲಸವನ್ನು ರೋಬೋಟ್ ಮಾಡುತ್ತದೆ. ವಾಯ್ಸ್ ಕಮಾಂಡ್ ತಂತ್ರಜ್ಞಾನವನ್ನು ಇದು ಹೊಂದಿರುವುದರಿಂದ ತನಗೇನು ಬೇಕು ಎಂಬುದನ್ನು ಆಕೆ ಹೇಳುತ್ತಾಳೆ. ಕೂಡಲೇ ಅದನ್ನು ಆಕೆಗೆ ನೀಡುತ್ತದೆ. ಪತ್ನಿಯ ಅನಾರೋಗ್ಯದ ಬಳಿಕ ಮಗಳಿಗೆ ಆಹಾರ ತಿನ್ನಿಸುವುದಕ್ಕೆ ಬಹಳ ಕಷ್ಟ ಪಡಬೇಕಾಗಿತ್ತು. ತಾನು ಮನೆಗೆ ಮರಳುವವರೆಗೂ ಆಕೆ ಹಸಿದ ಹೊಟ್ಟೆಯಲ್ಲಿ ಕಾಯುತ್ತಿದ್ದಳು. ಆದರೆ ಈಗ ನಾನು ಕೆಲಸ ಮುಗಿಸಿ ಬರುವಷ್ಟರಲ್ಲಿ ರೋಬೋಟ್ ಸಹಾಯದಿಂದ ಆಕೆ ಊಟ ಮಾಡುತ್ತಾಳೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಬಿಪಿನ್.
ಇನ್ನು ಬಿಪಿನ್ ಕಾಡಮ್ ಅವರ ಹೊಸ ಆಲೋಚನೆಗೆ ಗೋವಾ ರಾಜ್ಯ ಆವಿಷ್ಕಾರ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದೆ. ಅಲ್ಲದೆ ರೋಬೋಟ್ ಸಂಬಂಧಿಸಿ ಹೆಚ್ಚಿನ ಆವಿಷ್ಕಾರಕ್ಕೂ ಸಲಹೆ ನೀಡಿದ್ದು, ಇದಕ್ಕಾಗಿ ಹಣಕಾಸು ನೆರವು ನೀಡುವ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.