ತುಮಕೂರು, ಸೆ 25 (DaijiworldNews/DB): ಗುಬ್ಬಿ ತಾಲೂಕಿನ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಅವರಿಗೆ ಪಕ್ಷದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ100ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಜೆಡಿಎಸ್ಗೆ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ.
ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ಪಕ್ಷದ ವರಿಷ್ಠರ ನಡುವಿನ ಅಸಮಾಧಾನ ಇದೀಗ ಮತ್ತಷ್ಟು ಹೆಚ್ಚಾಗಿದ್ದು, ಕಾರ್ಯಕರ್ತರ ರಾಜೀನಾಮೆ ಮೂಲಕ ಅಸಮಾಧಾನ ಬುಗಿಲೆದ್ದಿದೆ. ಒಂದೇ ದಿನ 100ಕ್ಕೂ ಹೆಚ್ಚು ಮಂದಿ ಕಾರ್ತಕರ್ತರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿದವರ ಪೈಕಿ ಬಿದರೆ ಗ್ರಾಮದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗುಬ್ಬಿಯಲ್ಲಿ 50 ಸಾವಿರಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ರಾಜೀನಾಮೆ ಸಲ್ಲಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಎಸ್.ಆರ್. ಶ್ರೀನಿವಾಸ್ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಮುನಿಸಿದ್ದು, ಗುಬ್ಬಿಯಲ್ಲಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಮಾಹಿತಿಗಳು ಹೊರ ಬಂದಿತ್ತು. ಈ ನಡುವೆ ಗುಬ್ಬಿ ಕ್ಷೇತ್ರದಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದ ಜೆಡಿಎಸ್ನ ಬೃಹತ್ ಸಮಾವೇಶಕ್ಕೆ ಶಾಸಕ ಎಸ್.ಆರ್. ಶ್ರೀನಿವಾಸ್ ಅವರೇ ಗೈರಾಗಿದ್ದರು ಎನ್ನಲಾಗಿದೆ.
ಇನ್ನು ಎಸ್.ಆರ್. ಶ್ರೀನಿವಾಸ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಈಗಾಗಲೇ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಿದ್ದಾರೆ. ಆದರೆ ಸ್ಥಳೀಯ ನಾಯಕರು ಇದಕ್ಕೆ ಒಪ್ಪದ ಕಾರಣ ಇನ್ನೂ ಅವರು ತಮ್ಮ ನಿರ್ಧಾರವನ್ನು ತಿಳಿಸಿಲ್ಲ ಎನ್ನಲಾಗಿದೆ.