ಬೆಂಗಳೂರು, ಸೆ 25 (DaijiworldNews/DB): ಮ್ಯಾನ್ಮಾರ್ನಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ಬಂಡುಕೋರರ ಒತ್ತೆಯಾಳಾಗಿರುವ ಕುರಿತು ವರದಿಗಳು ಬಂದ ಬೆನ್ನಲ್ಲೇ ಆತನ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ಅಧಿಕಾರಿಗಳು ಸಮನ್ವಯ ಸಾಧಿಸಲಿದ್ದಾರೆ.
ಮ್ಯಾನ್ಮಾರ್ನಲ್ಲಿ 500ಕ್ಕೂ ಹೆಚ್ಚು ಮಂದಿ ಭಾರತೀಯರು ಬಂಡುಕೋರರ ಒತ್ತೆಯಾಳಾಗಿದ್ದಾರೆ. ಈ ಪೈಕಿ ತೆಲಂಗಾಣ, ಕೇರಳ ಮತ್ತು ತಮಿಳುನಾಡಿನ ಹಲವರಿದ್ದು, ಕರ್ನಾಟಕ ಮೂಲದ ಒಬ್ಬರಿದ್ದಾರೆ ಎಂಬ ವರದಿಗಳು ಬಂದ ಬೆನ್ನಲ್ಲೇ ಸರ್ಕಾರ ಆತನ ಬಗ್ಗೆ ವಿವರ ಪಡೆದು ರಕ್ಷಣೆಗೆ ಮುಂದಾಗಿದೆ. ಇದಕ್ಕಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಗೃಹ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಿ ವ್ಯಕ್ತಿಯ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ನೇಮಕಾತಿ ಏಜೆನ್ಸಿಗಳು ಥೈಲಾಂಡ್ನಲ್ಲಿ ಉದ್ಯೋಗದ ಆಸೆ ಹುಟ್ಟಿಸಿ ಯುವಕರನ್ನು ಬಲವಂತವಾಗಿ ಮ್ಯಾನ್ಮಾರ್ಗೆ ಕರೆದೊಯ್ಯುತ್ತಿವೆ. ಅಲ್ಲದೆ ಅಲ್ಲಿ ಸೈಬರ್ ಅಪರಾಧಿಗಳಾಗಿ ಕೆಲಸ ಮಾಡಲು ಒತ್ತಡ ಹೇರಲಾಗುತ್ತಿದೆ ಎಂದು ತಿಳಿದು ಬಂದಿದೆ.