ನವದೆಹಲಿ, ಸೆ 25 (DaijiworldNews/DB): ಆರೆಸ್ಸೆಸ್ ಕಾರ್ಯಕರ್ತನ ಮನೆಗೆ ಅಪರಿಚಿತರು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ.
ಪುರುಷ ಅನುಪಾಂಡಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವ ಎಂ.ಎಸ್.ಕೃಷ್ಣನ್ ಅವರ ಮನೆಗೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅಕ್ಕಪಕ್ಕದ ಜನ ಆತಂಕಗೊಂಡಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾತ್ರಿ ಸುಮಾರು 7:38ರ ವೇಳೆಗೆ ಅಪರಿಚಿತ ವ್ಯಕ್ತಿಗಳು ಕೃಷ್ಣನ್ ಅವರ ಮನೆಗೆ ಮೂರು ಪೆಟ್ರೋಲ್ ಬಾಂಬ್ಗಳನ್ನು ಎಸೆದು ಪರಾರಿಯಾಗಿದ್ದಾರೆ. ಯುವಕನೋರ್ವ ಮನೆಯತ್ತ ಓಡಿ ಬಂದು ಗೇಟ್ ಬಳಿ ನಿಂತು ಒಂದೊಂದಾಗಿ ಮೂರು ಬಾಂಬ್ಗಳನ್ನು ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಕೂಡಲೇ ಆತ ಇತರರ ಜೊತೆ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಮನೆಯಲ್ಲಿ ಸಂಜೆ ಪೂಜಾ ಕಾರ್ಯ ನಡೆಯುತ್ತಿತ್ತು. ಸುಮಾರು 65 ಮಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಬಾಂಬ್ ಶಬ್ದ ಕೇಳಿ ಬಂತು. ತತ್ಕ್ಷಣವೇ ಹೊರಗೆ ಬಂದು ನೋಡಿದಾಗ ಅಪರಿಚಿತರು ಬಾಂಬ್ ಎಸೆದು ಪರಾರಿಯಾಗಿದ್ದರು. ನನ್ನ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಕೃಷ್ಣನ್ ತಿಳಿಸಿರುವುದಾಗಿ ವರದಿಯಾಗಿದೆ.
ಆರ್ಎಸ್ಎಸ್ ಸದಸ್ಯ ಕೃಷ್ಣನ್ ಮತ್ತು ಬಿಜೆಪಿಯ ಮಧುರೈ ಜಿಲ್ಲಾಧ್ಯಕ್ಷ ಸುಸೀಂದ್ರನ್ ಕೀರತುರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆಯಲ್ಲಿ ಜೀವಪಾಯ ಸಂಭವಿಸಿಲ್ಲ ಎಂದು ಮಧುರೈ ದಕ್ಷಿಣದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.